ಡೆಂಗಿ: ನಿರ್ಲಕ್ಷಿಸಿದರೆ ವೈದ್ಯರ ವಿರುದ್ಧ ಕ್ರಮ

ದಾವಣಗೆರೆ.ಜು.೯; ರಾಜ್ಯದಲ್ಲಿ ಡೆಂಗಿ ಜ್ವರ ಮರಣ ಮೃದಂಗ ಬಾರಿಸುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆಯ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಡೆಂಗಿ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಬೇಕು. ನಿರ್ಲಕ್ಷ್ಯ ಕಂಡು ಬಂದರೆ ವೈದ್ಯರು ಮತ್ತು ಸಿಬ್ಬಂದಿಗಳ  ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಕೆ ನೀಡಿದರು.ನಗರದ ಚಿಗಟೇರಿ ಆಸ್ಪತ್ರೆಯಲ್ಲಿರುವ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸಂಜೆ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿದ ಶಾಸಕ ಕೆ.ಎಸ್.ಬಸವಂತಪ್ಪ, ಮಾಯಕೊಂಡ ಕ್ಷೇತ್ರದ ಎಲ್ಲಾ ಪಿಎಚ್‌ಸಿ ಕೇಂದ್ರಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ಡೆಂಗಿ ಸೋಂಕಿತರ ಸಂಖ್ಯೆ ಉಲ್ಬಣ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಅಲ್ಲದೇ ಕ್ಷೇತ್ರದಲ್ಲಿ ಜ್ವರದಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಸೂಚನೆ ನೀಡಿದರು.ಸೋಂಕಿತ ಜ್ವರದಿಂದ ಬಳಲಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೆ ಕೂಡಲೇ ಆ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಕ್ಷೇತ್ರದ ಎಲ್ಲಾ ಪಿಎಚ್‌ಸಿ ಕೇಂದ್ರಗಳಲ್ಲಿ ಲ್ಯಾಬ್‌ಗಳು ಇವೆ. ರಕ್ತದ ಮಾದರಿ ಸಂಗ್ರಹಿಸಿ ಡೆಂಗಿ ಜ್ವರವೋ ಅಥವಾ ಸಾಮಾನ್ಯ ಜ್ವರವೋ ಎಂಬ ಬಗ್ಗೆ ದೃಢಪಡಿಸಿಕೊಳ್ಳಬೇಕು. ಶಂಕಿತ ಡೆಂಗಿ ಜ್ವರ ಕಂಡು ಬಂದರೆ ಕೂಡಲೇ ಆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಬೇಕು. ಒಂದು ವೇಳೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೆ ಕೂಡಲೇ ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ವೈದ್ಯರಿಗೆ ಸೂಚನೆ ನೀಡಿದರು.ಕೆಲವು ಪಿಎಚ್‌ಸಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಔಷಧಿ ದಾಸ್ತಾನು ಮಾಡಲಾಗಿದೆ. ಕೆಲವು ಪಿಎಚ್‌ಸಿಗಳಲ್ಲಿ ಔಷಧಿ ಕೊರತೆ ಕಂಡು ಬರುತ್ತದೆ. ಈ ರೀತಿ ಆಗಬಾರದು. ಕೆಲವು ವೈದ್ಯರು ಹೊರಗಡೆ ಔಷಧಿ ತರಲು ಚೀಟಿ ಬರೆದುಕೊಡುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ತಾಲೂಕು ವೈದ್ಯಾಧಿಕಾರಿಗಳು ಮತ್ತು ಡಿಎಚ್‌ಒ ಎಲ್ಲಾ ಪಿಎಚ್‌ಸಿಗಳಿಗೆ ತಿಂಗಳಿಗೊಮ್ಮೆ ಭೇಟಿ ನೀಡಿ ಇವುಗಳಿಗೆ ಕಡಿವಾಣ ಹಾಕಬೇಕೆಂದು ತಾಕೀತು ಮಾಡಿದರು.