ಡೀಸೆಲ್ ಚಾಲಿತ ವಾಹನಕ್ಕೆ ಶೇ.೧೦ ಜಿಎಸ್‌ಟಿ

ನವದೆಹಲಿ,ಸೆ.೧೨- ಡೀಸೆಲ್ ಚಾಲಿತ ವಾಹನಗಳ ಮೇಲೆ ಹೆಚ್ಚುವರಿಯಾಗಿ ಶೇಕಡಾ ೧೦ ರಷ್ಟು ಸರಕು ಮತ್ತು ಸೇವಾ ತೆರಿಗೆ ವಿಧಿಸುವ ಸುಳಿವನ್ನು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರಸ್ತಾಪಿಸಿದ್ದಾರೆ.ಶೇಕಡಾ ೧೦ ರಷ್ಟು ಜಿಎಸ್‌ಟಿ ಹೆಚ್ಚಿಸುವ ಪತ್ರ ಸಿದ್ದವಾಗಿದೆ. ಡೀಸೆಲ್ ವಾಹನಗಳು ಮತ್ತು ಎಲ್ಲಾ ಎಂಜಿನ್‌ಗಳ ಮೇಲೆ ಹೆಚ್ಚುವರಿ ಶೇಕಡಾ ೧೦ರಷ್ಟು ಜಿಎಸ್‌ಟಿ ಹಾಕಲು ಹಣಕಾಸು ಸಚಿವರಿಗೆ ಸಂಜೆಯೇ ಪತ್ರ ಕಳುಹಿಸುವುದಾಗಿ ತಿಳಿಸಿದ್ದಾರೆ.ದೆಹಯಲ್ಲಿ ಭಾರತೀಯ ಆಟೋ ಮೊಬೈಲ್ ಉತ್ಪಾದಕ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,”ಅತ್ಯಂತ ಮಾಲಿನ್ಯಕಾರಕ” ಇಂಧನದಿಂದ ವಾಹನಗಳ ತಯಾರಿಕೆ ಆಟೋಮೊಬೈಲ್ ಕಂಪನಿಗಳನ್ನು ನಿರುತ್ಸಾಹಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಡೀಸೆಲ್ ಚಾಲಿತ ವಾಹನಗಳ ಮೇಲೆ ಶೇಕಡಾ ೧೦ ರಷ್ಟು ಜಿಎಸ್‌ಟಿ ವಿಧಿಸುವುದಾಗಿ ಪ್ರಕಟಿಸಿದ್ದಾರೆ.
ಆಟೋಮೊಬೈಲ್ ಉದ್ಯಮ ಸ್ವಯಂಪ್ರೇರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ ಅವರು ಇಲ್ಲದಿದ್ದರೆ ಸರ್ಕಾರ ಹಾಗೆ ಮಾಡಲು ಒತ್ತಾಯಿಸುವ ಪರಿಸ್ಥಿತಿ ಸೃಷ್ಟಿ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ.
ಡೀಸೆಲ್‌ಗೆ ವಿದಾಯ ಹೇಳಿ: ಗಡ್ಕರಿ
ಡೀಸೆಲ್‌ಗೆ ವಿದಾಯ ಹೇಳಿ, ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ಡೀಸೆಲ್ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗದಷ್ಟು ತೆರಿಗೆ ಹೆಚ್ಚಿಸುತ್ತೇವೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.ಡೀಸೆಲ್ ಕಾರಿನ ಪಾಲು ಕಳೆದ ಒಂಬತ್ತು ವರ್ಷಗಳಲ್ಲಿ ೨೦೧೪ ರಲ್ಲಿ ೩೩೫ ರಿಂದ ಶೇಕಡಾ ೨೮ ಕ್ಕೆ ಇಳಿದಿದೆ. ವಾಹನೋದ್ಯಮ ಡೀಸೆಲ್‌ನಿಂದ ಶುದ್ಧ ಇಂಧನ ಪರ್ಯಾಯಗಳಿಗೆ ಬದಲಾಯಿಸುವುದನ್ನು ತ್ವರಿತಗೊಳಿಸುವ ಅನಿವಾರ್ಯತೆ ಇದೆ ಎಂದಿದ್ದಾರೆ.ಡೀಸೆಲ್ ಎಂಜಿನ್‌ಗಳಿಗೆ ಸಂಬಂಧಿಸಿದ ಪರಿಸರ ಕಾಳಜಿಗಳ ಬಗ್ಗೆ ಪ್ರಸ್ತಾಪ ಮಾಡಿದ ಅವರು ಮಾಲಿನ್ಯ ಮತ್ತು ಇಂಗಾಲದ ಹೊರಸೂಸುವಿಕೆ ನಿಗ್ರಹಿಸುವ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದ್ದಾರೆ.ರಸ್ತೆ ಅಪಘಾತಗಳು ಮತ್ತು ಸಾವುನೋವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ವಾಹನ ಮತ್ತು ರಸ್ತೆ ಎಂಜಿನಿಯರಿಂಗ್ ಅನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ. ಹೀಗಾಗಿ ಡೀಸೆಲ್ ವಾಹನಗಳ ಮೇಲೆ ಜಿಎಸ್‌ಟಿ ಹೆಚ್ಚಿಸುವ ಪ್ರಸ್ತಾಪವನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.