ಡೀಮ್ಡ್ ಅರಣ್ಯ ೯ ಲಕ್ಷ ಹೆಕ್ಟರ್ ಕಂದಾಯ ಇಲಾಖೆಗೆ ವಾಪಸ್ಸು

ಬೆಂಗಳೂರು, ಸೆ. ೨೦- ರಾಜ್ಯದ ಡೀಮ್ಡ್ ಅರಣ್ಯ ಪ್ರದೇಶ ಎಂದು ಪರಿಗಣಿಸಿರುವ ೯ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ೬ ಲಕ್ಷ ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಸ್ ಕೊಡಲು ಅರಣ್ಯ
ಇಲಾಖೆ ಒಪ್ಪಿದ್ದು, ಈ ಭೂಮಿಯನ್ನು ಉಳುಮೆ ಮಾಡುತ್ತಿರುವವರಿಗೆ, ಮನೆ ಕಟ್ಟಿರುವವರಿಗೆ ಹಂಚಿಕೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಲಾಲ್ ಜಿ ಆರ್. ಮೆಂಡನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದೆ ಕೆಲ ಜಿಲ್ಲಾಧಿಕಾರಿಗಳು ತಮಗೆ ಯಾವುದೇ ಗೊಡವೆ ಬೇಡ ಎಂದು ೯ ಲಕ್ಷ ಹೆಕ್ಟೇರ್ ಕಂದಾಯ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಎಂದು ಘೋಷಿಸಿ ಈ ಬಗ್ಗೆ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ೬ ಲಕ್ಷ ಡೀಮ್ಡ್ ಫಾರೆಸ್ಟ್ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಸ್ ಪಡೆಯಲು ಅರಣ್ಯ ಸಚಿವರ ಜತೆ ಚರ್ಚೆ ಮಾಡಿದ್ದೇನೆ. ಸದ್ಯದಲ್ಲೇ ಈ ಭೂಮಿಯನ್ನು ವಾಪಸ್ ಪಡೆದು ಈ ಸಂಬಂಧ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ ನಂತರ ಈ ಜಾಗಗಳಲ್ಲಿ ಮನೆ ಕಟ್ಟಿ ಕೊಂಡಿರುವವರಿಗೆ, ಉಳುಮೆ ಮಾಡುತ್ತಿರುವವರಿಗೆ ಈ ಜಾಗವನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಗ್ರಾಮಾಂತರ ಭಾಗದ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ವಾಸದ ಮನೆಗಳನ್ನು ನಿರ್ಮಿಸಿರುವವರಿಗೆ ಅದನ್ನು ಸಕ್ರಮಗೊಳಿಸಲು ಭೂಕಂದಾಯ ಕಾಯ್ದೆ ೧೯೬೪ರ ಕಲಂ ೯೪ಸಿ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅನಧಿಕೃತವಾಗಿ ಮನೆ ನಿರ್ಮಿಸಿರುವ ೩೦x೪೦ ಅಡಿ, ೪೦x೬೦ ಅಡಿ, ೫೦x೮೦ ಅಡಿ ಅಳತೆಯ ವಾಸದ ಮನೆಗಳನ್ನು ಸಕ್ರಮಗೊಳಿಸಾಲಗುತ್ತಿದೆ ಎಂದರು.
ಈ ಸಕ್ರಮಗೊಳಿಸುವ ಅರ್ಜಿಗಳನ್ನು ಸ್ವೀಕರಿಸಲು ದಿನಾಂಕವನ್ನು ೩೧-೦೩-೨೦೨೨ ರವರೆಗೂ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.
ಸ್ವೀಕರಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸಲು ದಿನಾಂಕ ೩೧-೦೩-೨೦೨೩ರವರೆಗೂ ಅವಕಾಶ ಇರುತ್ತದೆ ಎಂದು ಅವರು ಹೇಳಿದರು.