
ಚಾಮರಾಜನಗರ, ಏ.26:- ಚಾಮರಾಜನಗರ ಜಿಲ್ಲಾ ವೈದ್ಯಕೀಯ ವಿಜ್ಞಾನ ಬೋಧಕ ಸಂಸ್ಥೆಯ ಡೀನ್ ಡಾ.ಸಂಜೀವ್ ಅವರು ಡಾ.ಬಿ.ಆರ್. ಅಂಬೇಡ್ಕರ್ ರವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ವಿವಿಧ ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದರು.
ಸಂತೆಮರಹಳ್ಳಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಕೆಲವು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ನಂತರ ಮೆರವಣಿಗೆ ಮೂಲಕ ಘೋಷಣೆ ಗಳನ್ನು ಕೂಗುತ್ತಾ ಭುವನೇಶ್ವರಿ ವೃತ್ತ ತಲುಪಿದ ಪ್ರತಿಭಟನಾಕಾರರು ಅಲ್ಲಿಯೂ ಸಹ ರಸ್ತೆ ತಡೆ ನಡೆಸಿ ಡೀನ್ ವಿರುದ್ಧ ಘೋಷಣೆಗಳನ್ನು ಕೂಗಿ ಡೀನ್ ಸಂಜೀವ್ ರವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಭುವನೇಶ್ವರಿ ವೃತ್ತದಿಂದ ಜೋಡಿ ರಸ್ತೆ ಮೂಲಕ ಹೊರಟ ಪ್ರತಿಭಟನಕಾರರು ಜೋಡಿ ರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ನಾಗಯ್ಯ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ತಾ.ಪಂ. ಮಾಜಿ ಸದಸ್ಯರುಗಳಾದ ಕಾಗಲವಾಡಿ ಶಿವಸ್ವಾಮಿ, ಆರ್. ಮಹದೇವ್ ಸೇರಿದಂತೆ ವಿವಿಧ ಪಕ್ಷಗಳ ಅನೇಕ ದಲಿತ ಮುಖಂಡರು, ಅನೇಕ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.