ಡಿ. 9ರಂದು ರಾಷ್ಟ್ರೀಯ ಲೋಕ ಅದಾಲತ್ 

ಸಂಜೆವಾಣಿ ವಾರ್ತೆ

ಚಿತ್ರದುರ್ಗ,ಅ.27:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ 2023ರ ಡಿಸೆಂಬರ್ 9ರಂದು ಜಿಲ್ಲೆಯಲ್ಲಿರುವ ಎಲ್ಲಾ ನ್ಯಾಯಾಲಯಗಳಲ್ಲಿ ಬೃಹತ್ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್.ರೇಖಾ ಹೇಳಿದರು.ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಗುರುವಾರ ರಾಷ್ಟ್ರೀಯ ಲೋಕ್ ಅದಾಲತ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಸರ್ವರಿಗೂ ನ್ಯಾಯ” ಎಂಬ ಧ್ಯೇಯವಾಕ್ಯದೊಂದಿಗೆ ಭಾರತದ ಸರ್ವೋಚ್ಛ ನ್ಯಾಯಾಲಯದ ಅಧಿಪತ್ಯದಲ್ಲಿ ನಡೆಯುತ್ತಿರುವ ಅಂಗ ಸಂಸ್ಥೆಗಳಾದ “ರಾಷ್ಟ್ರಿಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು “ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಡಿಸೆಂಬರ್ 9ರಂದು ಜಿಲ್ಲೆಯಲ್ಲಿರುವ ಎಲ್ಲಾ ನ್ಯಾಯಾಲಯಗಳಲ್ಲಿ ಬೃಹತ್ ಲೋಕ್ ಅದಾಲತ್ ಹಮ್ಮಿಕೊಂಡಿದ್ದು, ಸಾರ್ವಜನಿಕರು, ಪಕ್ಷಗಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಲೋಕ್ ಅದಾಲತ್‍ನಲ್ಲಿ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಚೆಕ್ ಅಮಾನ್ಯ ಪ್ರಕರಣಗಳು, ಕ್ರಿಮಿನಲ್ ಕಾಂಪೌಂಡಬಲ್ ಮೊಕ್ಕದ್ದಮೆಗಳು, ಆಸ್ತಿ ವಿಭಾಗದ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಅಪಘಾತ ವಿಮಾ ಪ್ರಕರಣಗಳು, ಕರಾರಿಗೆ ಸಂಬಂಧಿಸಿದ ಪ್ರಕರಣಗಳು, ಬ್ಯಾಂಕು ಕ್ಲೇಮ್ಸ್‍ಗಳು, ವಿವಿಧ ರೀತಿಯ ಸಿವಿಲ್ ಸ್ವರೂಪದ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಸಾರ್ವಜನಿಕ ಸೇವೆಗಳ ಪ್ರಕರಣ ರಾಜೀ ಮಾಡಿಕೊಳ್ಳಲು ಅರ್ಹವಾಗಿರುತ್ತವೆ. ಇದರಿಂದ ಪಕ್ಷಗಾರರಿಗೆ, ಶೀಘ್ರ ನ್ಯಾಯ, ಹಣ ಉಳಿತಾಯ, ರಾಜಿಯಾದ ಪ್ರಕರಣಗಳ ಮೇಲೆ ಯಾವುದೇ ಅಪೀಲಿಗೆ ಅವಕಾಶವಿರುವುದಿಲ್ಲ. ಕೌಟುಂಬಿಕ ಸಾಮರಸ್ಯ ಮತ್ತು ರಾಜೀಯಾದ ಸಿವಿಲ್ ಪ್ರಕರಣಗಳಲ್ಲಿ ಕೋರ್ಟ್ ಫೀ ಹಿಂದಿರುಗಿಸಲಾಗುವುದು ಹಾಗೂ ಪಕ್ಷಗಾರರಲ್ಲಿ win win situation  ಮೂಡುತ್ತದೆ. ಈ ಎಲ್ಲಾ ಕಾರಣಗಳಿಂದ ಲೋಕ್ ಅದಾಲತ್ ಆಯೋಜಿಸಲಾಗಿದೆ. ಸಾರ್ವಜನಿಕರು ಸಾಧ್ಯವಾದಷ್ಟು ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಪರಿಹರಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ. ಇದರಿಂದ ಎಲ್ಲರೂ ಖುಷಿಯಿಂದ ಜೀವನ ನಡೆಸಬೇಕು. ರಾಜೀಯಾಗದಂತಹ ಪ್ರಕರಣಗಳನ್ನು ಮಾತ್ರ  ನ್ಯಾಯಾಲಯಗಳಲ್ಲಿ ಪ್ರಕರಣ ನಡೆಸುವುದು ಉತ್ತಮ. ಹೆಚ್ಚು ಹೆಚ್ಚು ಪ್ರಕರಣಗಳನ್ನು ರಾಜೀ ಮಾಡಿಕೊಂಡರೆ ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಲಿದೆ. ಸಾರ್ವಜನಿಕರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಇದ್ದರು.