ಡಿ. 7 ರಿಂದ ಅಧಿವೇಶನ

ಬೆಂಗಳೂರು, ನ. ೧೮- ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಮುಂದಿನ ತಿಂಗಳು ೭ ರಿಂದ ೧೫ ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಸಾಮಾನ್ಯವಾಗಿ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲಾಗುತ್ತಿತ್ತು. ಕೊರೊನಾ ಕಾರಣದಿಂದ ಈ ಬಾರಿಯ ಚಳಿಗಾಲದ ಅಧಿವೇಶನ ಬೆಂಗಳೂರಿನಲ್ಲೇ ನಡೆಸಲು ನಿರ್ಧರಿಸಲಾಗಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ಡಿ. ೭ ರಿಂದ ೧೫ ರವರೆಗೂ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಪುಟ ಸಭೆಯ ನಂತರ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ವರ್ಷವೂ ವಿಧಾನಸಭೆಯ ನಿಯಮಾವಳಿಗಳಂತೆ ನವೆಂಬರ್-ಡಿಸೆಂಬರ್ ಮಧ್ಯಭಾಗದಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುತ್ತದೆ. ಅದರಂತೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಡಿ. ೭ ರಿಂದ ೧೫ರ ವರೆಗೂ ಅಧಿವೇಶನ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.
ಕೊರೊನಾ ಮಧ್ಯೆಯೇ ವಿಧಾನಸಭೆಯ ಮಳೆಗಾಲದ ಅಧಿವೇಶನವನ್ನು ಸೆಪ್ಟೆಂಬರ್ ೨೧ ರಿಂದ ಸೆ. ೨೬ರ ವರೆಗೂ ನಡೆಸಲಾಗಿತ್ತು. ಅಂತೆಯೇ ಈಗಲೂ ಸಹ ಕೊರೊನಾ ಭೀತಿಯ ಮಧ್ಯೆಯೇ ಚಳಿಗಾಲದ ವಿಧಾನಮಂಡಲದ ಅಧಿವೇಶನ ನಡೆಸಲಾಗುತ್ತದೆ.
ವಿಜಯನಗರ ಹೊಸ ಜಿಲ್ಲೆ
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆಗೆ ಅನೌಪಚಾರಿಕೆಗೂ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಅನುಮೋದನೆ ಪಡೆಯಲಾಗುವುದು ಎಂದು ಅವರು ಹೇಳಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರದ ಸಂಬಂಧ ಭುಗಿಲೆದ್ದಿರುವ ಆಕ್ರೋಶದ ಮಧ್ಯೆಯೇ ಮರಾಠ ಸಮುದಾಯ ನಿಗಮ ಸ್ಥಾಪಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಪ್ರಾಧಿಕಾರ ರಚಿಸಲು ಕಾನೂನು ತಿದ್ದುಪಡಿ ಅಗತ್ಯ ಇರುವುದರಿಂದ ಪ್ರಾಧಿಕಾರದ ಬದಲು ಮರಾಠ ಸಮುದಾಯ ನಿಗಮ ಸ್ಥಾಪನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಮರಾಠ ಸಮುದಾಯ ನಿಗಮ ಸ್ಥಾಪನೆ ಸಂಬಂಧ ವಿರೋಧ ವ್ಯಕ್ತಪಡಿಸಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಹೋರಾಟ ಅಗತ್ಯವಿರಲಿಲ್ಲ. ಸರ್ಕಾರ ತೀರ್ಮಾನ ಕೈಗೊಂಡಿದೆ. ಅದರಂತೆ ನಿಗಮ ಸ್ಥಾಪನೆಯಾಗಲಿದೆ ಎಂದು ಅವರು ಹೇಳಿದರು.
ಯಾವುದೇ ಜನಾಂಗದ ಅಭಿವೃದ್ಧಿಗೆ ಪ್ರಾಧಿಕಾರವನ್ನು ರಚಿಸಿಲ್ಲ. ನಿಗಮಗಳನ್ನೇ ರಚಿಸಲಾಗಿರುವುದು. ಭಾಷಾ, ಪ್ರಾಂತ್ಯ ಅಭಿವೃದ್ಧಿಗೆ ಮಾತ್ರ ಪ್ರಾಧಿಕಾರಗಳು ರಚನೆಯಾಗಿವೆ. ಹಾಗಾಗಿಯೇ ಪ್ರಾಧಿಕಾರದ ಬದಲು ಮರಾಠ ಸಮುದಾಯ ನಿಗಮ ಸ್ಥಾಪನೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೂ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಈ ನಿಗಮಕ್ಕೆ ಹಣ ಒದಗಿಸುವ ಬಗ್ಗೆ ಇನ್ನು ಯಾವುದೇ ನಿರ್ಧಾರವಾಗಿಲ್ಲ ಎಂದು ಅವರು ತಿಳಿಸಿದರು.
೨೦೨೧ನೇ ಸಾಲಿನಲ್ಲಿ ಸರ್ಕಾರಿ ನೌಕರರಿಗೆ ೨೧ ದಿನ ಸಾರ್ವಜನಿಕ ರಜೆ ಹಾಗೂ ೧೯ ನಿರ್ಬಂಧಿತ ರಜೆ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಮೀಸಲಾತಿ ಹೆಚ್ಚಳ ಸಂಬಂಧ ಸಂಪುಟ ಉಪಸಮಿತಿ ರಚಿಸಿ ಈ ಸಮಿತಿಯ ವರದಿಯನ್ನಾಧರಿಸಿ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆಯೂ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ ಎಂದು ಅವರು ಹೇಳಿದರು.
ಹೊಸಪೇಟೆಯಲ್ಲಿ ೧೩.೮೫ ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ ಸ್ಥಾಪನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು.
ಬೆಳಗಾವಿ ನಗರದ ದಕ್ಷಿಣ ಮತ ಕ್ಷೇತ್ರದಲ್ಲಿ ೨೮.೬೩ ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ ಎಂದರು.
ಕರ್ನಾಟಕ ಕೃಷಿ ಸೇವೆಗಳ ನೇಮಕಾತಿ ನಿಯಮಗಳು-೨೦೨೦ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
೨೦೨೧ನೇ ಸಾಲಿಗೆ ಕೃಷ್ಣ ಜಲಭಾಗ್ಯ ನಿಗಮ ಐ.ಇ.ಬಿ.ಆರ್. ಅಡಿಯಲ್ಲಿ ೫೦೦ ಕೋಟಿ, ಕರ್ನಾಟಕ ನೀರಾವರಿ ನಿಗಮ ೬೫೦ ಕೋಟಿ ರೂ., ಕಾವೇರಿ ನೀರಾವರಿ ನಿಗಮಕ್ಕೆ ೨೫೦ ಕೋಟಿ, ವಿಶ್ವೇಶ್ವರಯ್ಯ ಜಲ ನಿಗಮ ೨೫೦ ಕೋಟಿ ರೂ.ಗಳ ಹಣವನ್ನು ಅವಧಿ ಸಾಲವಾಗಿ ಪಡೆಯಲು ಸರ್ಕಾರಿ ಖಾತರಿ ನೀಡುವ ಆದೇಶಕ್ಕೆ ಇಂದಿನ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಪ್ರವಾಹ ಪೀಡಿತ ಜಿಲ್ಲೆಗಳಿಗೆ ೧ ಸಾವಿರ ಕೋಟಿ ಬಿಡುಗಡೆ ಮಾಡಿ ಪರಿಹಾರ ಕಾರ್ಯಗಳು ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಪ್ರವಾಹ ಪರಿಹಾರ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ನೀಡಿರುವ ೪ ಸಾವಿರ ಕೋಟಿ ರೂ. ಹಣದಲ್ಲಿ ಪರಿಹಾರ ಕಾರ್ಯಗಳು ನಡೆದಿವೆ ಎಂದು ಅವರು ಹೇಳಿದರು.