ಡಿ.6ರಂದು ಬೆಂಗಳೂರಿನಲ್ಲಿ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ

ಕಲಬುರಗಿ:ನ.7: ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ 6ರಂದು ದಲಿತರ ಸಾಂಸ್ಕøತಿಕ ಪ್ರತಿತೋಧ ಹಾಗೂ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ ನಡೆಯಲಿದೆ ಎಂದು ಡಿಎಸ್‍ಎಸ್ ರಾಜ್ಯ ಸಂಚಾಲಕ ಡಿ.ಜಿ.ಸಾಗರ್ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ವತಿಯಿಂದ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದಲಿತ ಸಂಘರ್ಷ ಸಮಿತಿಯು ಹಲವು ಬಣಗಳಲ್ಲಿ ಹಂಚಿ ಹೋಗಿವೆ. ಈ ಹಿನ್ನೆಲೆಯಲ್ಲಿ ಹೋರಾಟದ ತೀವ್ರತೆಗೆ ಸಂಘಟನಾತ್ಮಕವಾಗಿ ತಾಕತ್ತು ರೂಪಿಸುವ ಹಿನ್ನೆಲೆಯಲ್ಲಿ ಎಲ್ಲ ಚದುರಿ ಹೋಗಿರುವ ಸಂಘಟನೆಗಳು ಒಂದೇ ಶೀರ್ಷಿಕೆಯಡಿ ಕಾರ್ಯನಿರ್ವಹಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವೂ ಆಗಿರುವ ಡಿ.6ರಂದು ಎಲ್ಲ ದಲಿತ ಸಂಘರ್ಷ ಸಮಿತಿಗಳು ಐಕ್ಯತಾ ಸಮಾವೇಶದ ವೇದಿಕೆಯಲ್ಲಿ ಒಂದಾಗಲಿವೆ ಎಂದರು.
ಇಂದು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಹಿಂದೆಂದಿಗಿಂತಲೂ ಹೆಚ್ಚು ಅಪಾಯಕ್ಕೆ ಸಿಲುಕಿವೆ. ಆರ್‍ಎಸ್‍ಎಸ್ ಮತ್ತು ಬಿಜೆಪಿ ಅಜೆಂಡಾ ದೇಶದಲ್ಲಿ ಎಲ್ಲರ ಮೇಲೆ ಹೇರುವ ಯತ್ನ ಬಹಿರಂಗವಾಗಿ ನಡೆಯುತ್ತಿದೆ. ಹಾಗಾಗಿ, ಪ್ರಜಾಪ್ರಭುತ್ವದ ಆಶಯಗಳು ಮಣ್ಣು ಪಾಲಾಗುತ್ತಿದ್ದು, ಸಹೋದರತೆ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ನೈಜ ಆಶಯಗಳು ಈಡೇರದಂತಾಗಿವೆ ಎಂದು ಸಾಗರ್ ವಿಷಾದ ವ್ಯಕ್ತಪಡಿಸಿದರು.
ದೇಶದಲ್ಲಿ ಬಿಜೆಪಿ ಸರಕಾರ ಎಂಬುದು ನೆಪ ಮಾತ್ರಕ್ಕೆ ಆಡಳಿತ ನಡೆಸುತ್ತಿದ್ದು, ಹಿಂಬಾಗಲಿನಲ್ಲಿ ನಿಂತು ಆರ್‍ಎಸ್‍ಎಸ್ ತನ್ನೆಲ್ಲಾ ಪ್ರಣಾಳಿಕೆಗಳನ್ನು ಜಾರಿಗೆ ತರುವ ಯತ್ನ ನಡೆಸುತ್ತಿದೆ. ಆರ್‍ಎಸ್‍ಎಸ್ ನಡೆಸುತ್ತಿರುವ ಇಂತಹ ಯತ್ನಕ್ಕೆ ಭಾರತೀಯ ಜನತಾ ಪಕ್ಷ ಒತ್ತಾಸೆಯಾಗಿ ನಿಂತು ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ, ಬ್ರಾಹ್ಮಣ್ಯದ ತತ್ವಗಳನ್ನು ಸಮಾಜದ ಮೇಲೆ ಬಲವಂತವಾಗಿ ಹೇರುವ ಕೆಲಸ ನಡೆದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯ ಕೃಪಾಕಟಾಕ್ಷ ಎಂಬಂತೆ ದೇಶದ ನೈಸರ್ಗಿಕ ಸಂಪನ್ಮೂಲಗಳು ಕೋಟ್ಯಾಧೀಶರ ಹಾಗೂ ಕಾರ್ಪೊರೇಟ್ ಕಂಪನಿಗಳ ಪಾಲಾಗುತ್ತಿದೆ. ಮೇಲಾಗಿ, ನ್ಯಾಯಾಂಗವೂ ಭಾಗಶಃ ಸರಕಾರದ ಒತ್ತಡಕ್ಕೆ ಸಿಲುಕಿ ಹತಾಶೆಯಿಂದ ಕಾರ್ಯನಿರ್ವಹಿಸುವಂತಾಗಿದೆ. ಸರಕಾರಿ ಮತ್ತು ಸಹಕಾರಿ ಕ್ಷೇತ್ರದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಯತ್ನ ನಡೆದಿದೆ. ಆ ಮೂಲಕ ದಲಿತ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ವ್ಯವಸ್ಥೆಯನ್ನು ಕೊನೆಗಾಣಿಸುವ ಯತ್ನ ನಡೆಯುತ್ತಿದೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ರಕ್ಷಿಸುವ ಸದಾಶಯದೊಂದಿಗೆ ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಿ.ಜಿ.ಸಾಗರ್ ಮಾಹಿತಿ ನೀಡಿದರು.
ಎಸ್.ವೆಂಕಟೇಶ್, ಮಾವಳ್ಳಿ ಶಂಕರ್, ಲಕ್ಷ್ಮಿನಾರಾಯಣ ನಾಗವಾರ, ಎನ್.ಮುನಿಸ್ವಾಮಿ, ಜಿಗಣಿ ಶಂಕರ್, ಅಣ್ಣಯ್ಯ, ಗುರುಪ್ರಸಾದ್ ಕೆರೆಗೋಡು, ಅರ್ಜುನ ಭದ್ರೆ, ಎಸ್.ಆರ್.ಕೊಲ್ಲೂರ್ ಎಂ.ಸೋಮಶೇಖರ್ ಹಾಗೂ ವಿ.ನಾಗರಾಜ್ ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.