ಡಿ. 5 ರಿಂದ ಬೀದರನಲ್ಲಿ ಅಗ್ನಿಪಥ್ ನೇಮಕಾತಿ

ಕಲಬುರಗಿ,ಆ.2:ಬೆಂಗಳೂರಿನ ನೇಮಕಾತಿ ವಲಯದ ಪ್ರಧಾನ ಕಚೇರಿ ಹಾಗೂ ಬೆಳಗಾವಿ ಸೇನಾ ನೇಮಕಾತಿ ಕಚೇರಿಯಿಂದ ಬೀದರಿನ ನೆಹರು ಸ್ಟೇಡಿಯಂನಲ್ಲಿ 2022ರ ಡಿಸೆಂಬರ್ 5 ರಿಂದ 22ರ ವರೆಗೆ ಅಗ್ನಿಪಥ್ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ.
ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‍ಮನ್ 10ನೇ ತರಗತಿ ತೇರ್ಗಡೆ, ಅಗ್ನಿವೀರ್ ಟ್ರೇಡ್ಸ್‍ಮೆನ್ 8ನೇ ತರಗತಿ ತೇರ್ಗಡೆ, ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ಲಿಕಲ್ ವಿಭಾಗಗಳಿಗೆ ನೇಮಕಾತಿ ರ್ಯಾಲಿಯನ್ನು ನಡೆಯಲಿದ್ದು, ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ರಾಯಚೂರ ಹಾಗೂ ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳು ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಕಚೇರಿಯ ನಿರ್ದೇಶಕ ಕರ್ನಲ್ ನಿಶಾಂತ ಶೆಟ್ಟಿ ತಿಳಿಸಿದ್ದಾರೆ.
ಅಭ್ಯರ್ಥಿಗಳು 2022ರ ಆಗಸ್ಟ್ 5 ರಿಂದ ಸೆಪ್ಟೆಂಬರ್ 3ರ ವರೆಗೆ joinindianarmy.nic.in ವೆಬ್‍ಸೈಟ್‍ದಲ್ಲಿ ಆನ್‍ಲೈನ್ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಅವರ ನೋಂದಾಯಿತ ಇ-ಮೇಲ್ ವಿಳಾಸಕ್ಕೆ 2022ರ ನವೆಂಬರ್ 10 ರಿಂದ 20ರವರೆಗೆ ಕಳುಹಿಸಲಾಗುತ್ತದೆ. ನೇಮಕಾತಿ, ವಯೋಮಿತಿ, ವಿದ್ಯಾರ್ಹತೆ ಹಾಗೂ ಇತರೆ ಮಾನದಂಡ ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವೀಕ್ಷಿಸಲು ಕೋರಿದೆ.