ಡಿ 5 ರಂದು ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರ ಪುಣ್ಯಸ್ಮರಣೋತ್ಸವ

ದಾವಣಗೆರೆ ಡಿ  3 :  ತ್ರಿವಿಧ ದಾಸೋಹಿ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಹಿರಿಯ ಜಗದ್ಗುರು ಲಿಂಗೈಕೆ ಡಾ.  ಅಭಿನವ ಅನ್ನದಾನ ಮಹಾಸ್ವಾಮಿಗಳವರ ಪುಣ್ಯಸ್ಮರಣೆಯನ್ನು ನಗರದಲ್ಲಿ ಡಿ.5  ರಂದು ಆಯೋಜಿಸಲಾಗಿದೆ ಎಂದು ಅನ್ನದಾನೇಶ್ವರ ಸಾರ್ವಜನಿಕ ಸೇವಾ ಟ್ರಸ್ಟಿನ ಉಪಾಧ್ಯಕ್ಷರಾದ ಅಮರಯ್ಯ ಗುರುವಿನ ಮಠ ಹಾಗೂ ಕಾರ್ಯದರ್ಶಿ ಎನ್. ಅಡಿವಪ್ಪ ತಿಳಿಸಿದರು.  ಅವರಿಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಇದೇ ಡಿಸೆಂಬರ್ 5ರಂದು ನಗರದಲ್ಲಿ ರುವ ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಅನ್ನದಾನೇಶ್ವರ ಮಠದಲ್ಲಿ ಬೆಳಿಗ್ಗೆ  ಆರು ಗಂಟೆಗೆ ರುದ್ರಾಭಿಷೇಕ ನಂತರ 10.30 ರಿಂದ ಪುಣ್ಯಸ್ಮರಣೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.      ಹಾಲಕೆರೆ ಜಗದ್ಗುರು ಶ್ರೀ ಮನಿಪ್ರ  ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರ ಅಪ್ಪಣೆಯ ಮೇರೆಗೆ  ಆವರಗೊಳ್ಳ ಪುರವರ್ಗ ಮಠದ ಶ್ರೀ ಷ ಬ್ರ  ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳವರು ದಿವ್ಯಸಾನಿಧ್ಯದಲ್ಲಿ ನಡೆಯುವ ಪುಣ್ಯಸ್ಮರಣೋತ್ಸವ ದಲ್ಲಿ,  ವಿರಕ್ತಮಠದ ಶ್ರೀ ಬಸವಪ್ರಭು ಮಹಾಸ್ವಾಮಿಗಳವರು ನುಡಿನಮನ ಸಲ್ಲಿಸಲಿದ್ದಾರೆ. ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣನವರು   ಅಧ್ಯಕ್ಷತೆ ವಹಿಸಲಿದ್ದು ಇದೇ ಸಂದರ್ಭದಲ್ಲಿ ಮಹಾಂತೇಶ್ ಶಾಸ್ತ್ರಿಯವರು ಉಪನ್ಯಾಸ ನೀಡಲಿದ್ದಾರೆ ಎಂದರು ಶ್ರೀಗಳವರ  ನೆನಹು :   ತ್ರಿವಿಧ ದಾಸೋಹಿ ಗಳು ಶ್ರೀಮದ್ವೀರಶೈವ ಶಿವಯೋಗ ಮಂದಿರದ ಅಧ್ಯಕ್ಷರು,  ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಜಗದ್ಗುರುಗಳಾಗಿದ್ದ ಡಾ.  ಅಭಿನವ ಅನ್ನದಾನ ಮಹಾಸ್ವಾಮಿಗಳವರು ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ನೀಡಿದ್ದಾರೆ ಅಲ್ಲದೆ ಆಂಧ್ರದ ಗಡಿಭಾಗದಲ್ಲಿ ಉಚಿತ ಕನ್ನಡ ಶಾಲೆಗಳನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ,  ಅಂಧ ಮತ್ತು ಕಿವುಡ ಮಕ್ಕಳ ಶಾಲೆಗಳನ್ನು ಆರಂಭಿಸಿದ್ದು ಉಚಿತ ವಿದ್ಯಾಭ್ಯಾಸ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಿಕೊಟ್ಟವರು ಹಾಗೂ ಗ್ರಾಮಾಂತರದಲ್ಲಿ ಸಾವಯವ ಗೊಬ್ಬರದ ಬಗ್ಗೆ ರೈತರ ಜಾಗೃತಿ ಶಿಬಿರಗಳನ್ನು ನಡೆಸಿದ್ದು,  ಕಳೆದ ವರ್ಷ ಅತಿವೃಷ್ಟಿ ಮತ್ತು ಅನಾವೃಷ್ಟಿ ಗಳಿಂದ ಹಾನಿಗೀಡಾದ ಪ್ರದೇಶಗಳಿಗೆ ಶ್ರೀಮಠದಿಂದ ಸುಮಾರು ತಿಂಗಳುಗಳ ಕಾಲ ಲಕ್ಷಾಂತರ ಜನರಿಗೆ ಉಚಿತ ಊಟೋಪಚಾರಗಳನ್ನು ಏರ್ಪಡಿಸಿದ್ದಾರೆ . ಒಂದೇ ದಿನ ರಕ್ತದಾನ ಶಿಬಿರಗಳನ್ನು ನಡೆಸಿ ಉತ್ತರ ಕರ್ನಾಟಕ ಭಾಗದಲ್ಲಿ 650 ಕ್ವಿಂಟಾಲ್  ರಕ್ತವನ್ನು ಸಂಗ್ರಹಿಸಿ ವಿವಿಧ ಆಸ್ಪತ್ರೆಗಳಿಗೆ ಕಳಿಸಿ ಸಾವಿರಾರು ಜನರ ಪ್ರಾಣವನ್ನು ಉಳಿಸಿದ್ದಾರೆ.  ಇನ್ನೂ ಇಂತಹ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಮಾತೃ ಹೃದಯದ ಶ್ರೀಗಳವರನ್ನು ಪ್ರತಿಯೊಬ್ಬರೂ ಸ್ಮರಿಸುತ್ತಿದ್ದಾರೆ ಎಂದರು . ಶ್ರೀಗಳವರು ಕಳೆದ 22ರಂದು ಲಿಂಗೈಕ್ಯ ರಾಗಿದ್ದು ಅವರ ಸ್ಮರಣೋತ್ಸವ ವನ್ನು  ಎಲ್ಲಾ ಶಾಖಾಮಠದಲ್ಲಿ ಏರ್ಪಡಿಸುತ್ತಿದ್ದು ಅದರಂತೆ  ದಾವಣಗೆರೆಯಲ್ಲಿ ಸಹ ನಾಳೆ ಭಾನುವಾರ ದಿವಸ ಅವರ ಸೇವಾಕಾರ್ಯವನ್ನು ಸ್ಮರಿಸಿ ದಾವಣಗೆರೆ ಭಕ್ತರಿಂದ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ  ಡಾ. ಹಾಸಭಾವಿ ಶಿವಕುಮಾರ್, ಕಾರ್ಯದರ್ಶಿ ಎನ್. ಅಡಿವಪ್ಪ , ಶಿವಪುತ್ರಪ್ಪ, ಎನ್ ಎ  ಗಿರೀಶ್, ಪತ್ರಕರ್ತ ವೀರಪ್ಪ ಎಂ. ಭಾವಿ ಇನ್ನು ಮುಂತಾದವರು ಉಪಸ್ಥಿತರಿದ್ದರು.