ಡಿ.31ರಂದು ಕೋವಿಡ್ ಕತ್ತಲೆಯಲ್ಲೂ ರಂಗಬೆಳಕು ಪುಸ್ತಕ ಬಿಡುಗಡೆ

ಮೈಸೂರು,ಡಿ.28-ಕೋವಿಡ್-19 ಕಾರಣದಿಂದಾಗಿ ವಿಶ್ವದಾದ್ಯಂತ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ರಂಗಾಯಣವು ವೈರಸ್ ವಿರುದ್ಧ ಮೈಕೊಡವಿ ನಿಂತು ಸರ್ಕಾರ ರೂಪಿಸಿದ ನಿಯಮಗಳನ್ನು ಪಾಲಿಸುತ್ತಲೇ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿತ್ತು.
ಇದೀಗ ರಂಗಾಯಣದ ಒಂದು ವರ್ಷದ ಚಟುವಟಿಕೆಯ ಮಾಹಿತಿಯನ್ನು ತಮ್ಮ ಮುಂದಿಡುವ ಮತ್ತು ದಾಖಲಿಸುವ ಪ್ರಯತ್ನವಾಗಿ ಕೋವಿಡ್ ಕತ್ತಲೆಯಲ್ಲೂ ರಂಗಬೆಳಕು' ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ. ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಇಂದು ರಂಗಾಯಣದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು. ಡಿ.31 ಮಧ್ಯಾಹ್ನ 3.30ಕ್ಕೆ ರಂಗಾಯಣದ ಯೋಗವನ ಆವರಣ ಮತ್ತು ಭೂಮಿಗೀತದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ಕಲಾ ನಿರ್ದೇಶ ಶಶಿಧರ್ ಅಡಪ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದಕೋಲಾಟ ಮತ್ತು ರಾಗ ಸರಾಗ’ ಪ್ರಾತ್ಯಕ್ಷಿಕೆ ಪ್ರದರ್ಶನವಿದೆ. ಸಂಜೆ 6.30ಕ್ಕೆ ವನರಂಗದಲ್ಲಿ ಪುತ್ತೂರಿನ ಆಂಜನೇಯ ಮಹಿಳಾ ಯಕ್ಷಗಾನ ತಂಡದಿಂದ ಭೀಷ್ಮಾರ್ಜುನ' ತಾಳಮದ್ದಳೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು. ಜ.2 ರಿಂದ ರಾಗ ರಂಗಾಯಣ: ರಂಗಭೀಷ್ಮ ಬಿ.ವಿ.ಕಾರಂತರು ಸಂಗೀತ ಎನ್ನುವುದು ನಿಜವಾದ ಸೆಕ್ಯೂಲರ್. ಸಂಗೀತಕ್ಕೆ ಧರ್ಮದ ಹಂಗಿಲ್ಲ. ಅಭಿನಯ-ನಾಟಕ ಅಭಿನೀತವಾಗೋದು ಸಂಗೀತದ ಮೂಲಕ ಎಂದು ಹೇಳಿದ್ದರು. ಅವರ ಈ ಮಾತಿನಿಂದ ಪ್ರೇರಣೆಗೊಂಡು ರಂಗಾಯಣವುರಾಗ ರಂಗಾಯಣ’ ವನ್ನು ಪ್ರಸ್ತುತ ಪಡಿಸುತ್ತಿದೆ. ಪ್ರತಿ ತಿಂಗಳ ಮೊದಲ ಶನಿವಾರ ಕವಿಗಳ ಕಾವ್ಯ ಗಾಯನ, ಜನಪದ ಮಹಾಕಾವ್ಯ ಗಾಯನ, ರಂಗಗೀತೆಗಳು, ತತ್ವಪದ ಗಾಯನ, ವಚನ ಗಾಯನ ಇತ್ಯಾದಿಗಳು ಈ ಕಾರ್ಯಕ್ರಮದಲ್ಲಿರಲಿದೆ.
ಹೊಸ ವರ್ಷದಿಂದ ಈ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಜ.2 ರಂದು ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ರಾಗ ರಂಗಾಯಣ' ಮೊದಲ ಕಾರ್ಯಕ್ರಮವಾಗಿಬೇಂದ್ರೆ ಬೆರಗು’ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದೆ. ಖ್ಯಾತ ಗಾಯಕಿ ಹೆಚ್.ಆರ್.ಲೀಲಾವತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬೇಂದ್ರೆಯವರ ಕವಿತೆಗಳ ಗಾಯನ ಇರಲಿದ್ದು, ರಂಗಾಯಣದ ಕಲಾವಿದ, ಹಿಂದೂಸ್ತಾನಿ ಗಾಯಕ ರಾಮಚಂದ್ರ ಹಡಪದ ಸಂಗೀತ ನಿರ್ದೇಶನವಿದ್ದು, ಸಾಹಿತಿ, ಬರಹಗಾರ ಜಿ.ಪಿ.ಬಸವರಾಜು ಕಾರ್ಯಕ್ರಮ ಸಂಯೋಜನೆ ಮಾಡಿದ್ದಾರೆ.
ಪದ್ಮಶ್ರೀ ಬಿ.ವಿ.ಕಾರಂತ ರಸ್ತೆ ಅಭಿಯಾನ: ಬಿ.ವಿ.ಕಾರಂತರು ಭಾರತೀಯ ರಂಗಭೂಮಿಯಲ್ಲಿ ರಂಗಭೀಷ್ಮ' ಎಂದು ಕರೆಸಿಕೊಂಡವರು. ಇವರ ಹೆಸರನ್ನು ಚಿರಸ್ಥಾಯಿಯಾಗಿಸಲು ಕರ್ನಾಟಕ ಕಲಾಮಂದಿರ ಮತ್ತು ರಂಗಾಯಣಕ್ಕೆ ಹೊಂದಿಕೊಂಡಿರುವ (ಹುಣಸೂರು ಮುಖ್ಯರಸ್ತೆಯಿಂದ ಕುಕ್ಕರಹಳ್ಳಿ ಕೆರೆಯ ಕಡೆಗೆ ರೈಲ್ವೆ ಗೇಟ್ ತನಕ) ರಸ್ತೆಗೆಪದ್ಮಶ್ರೀ ಬಿ.ವಿ.ಕಾರಂತ ರಸ್ತೆ’ ಎಂದು ನಾಮಕರಣ ಮಾಡಬೇಕೆಂದು ಸರ್ಕಾರವನ್ನು ಅಡ್ಡಂಡ ಸಿ.ಕಾರ್ಯಪ್ಪ ಅವರು ಒತ್ತಾಯಿಸಿದರು.

ಡಿ.31 ರಂದು ಬೆಳಿಗ್ಗೆ 11.30ಕ್ಕೆ ರಂಗಾಯಣದ ಗೇಟ್ ನ ಮುಂಭಾಗದ ರಸ್ತೆಯಲ್ಲಿ ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಅಧ್ಯಕ್ಷ ಎಚ್.ಎಸ್.ಸುರೇಶ್ ಬಾಬು, ಹಿರಿಯ ರಂಗಕರ್ಮಿ ಜಯರಾಮ್ ಪಾಟೀಲ್, ರಾಜಶೇಖರ ಕದಂಬ ಅವರ ನೇತೃತ್ವದಲ್ಲಿ `ಪದ್ಮಶ್ರೀ ಬಿ.ವಿ.ಕಾರಂತ ರಸ್ತೆ’ ನಾಮಕರಣಕ್ಕೆ ಒತ್ತಾಯಿಸಿ ಅಭಿಯಾನ ಆರಂಭಿಸಿ ಈ ಬಗ್ಗೆ ಮಹಾನಗರಪಾಲಿಕೆಗೆ ಮನವಿ ಪತ್ರವನ್ನು ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಂಟಿ ನಿರ್ದೇಶಕರು ಮಲ್ಲಿಕಾರ್ಜುನ ಸ್ವಾಮಿ ಇದ್ದರು