ಡಿ. 30 ರಂದು ಮತ ಎಣಿಕೆ: ಮದ್ಯಮಾರಾಟ ನಿಷೇಧ

ಕಲಬುರಗಿ.ಡಿ.29:ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆಯು ಡಿ. 30 ರಂದು ಬೆಳಿಗ್ಗೆ 8 ಗಂಟೆಯಿಂದ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಜರುಗಲಿದೆ. ಈ ಎಲ್ಲಾ ಮತ ಎಣಿಕೆ ಕೇಂದ್ರಗಳ 5 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಮಾತ್ರ ಇದೇ ಡಿಸೆಂಬರ್ 29ರ ಮಧ್ಯರಾತ್ರಿ 12 ಗಂಟೆಯಿಂದ ಡಿಸೆಂಬರ್ 30ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ತರಹದ ಮದ್ಯದ ಅಂಗಡಿ ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ವಿ.ವಿ.ಜ್ಯೋತ್ಸ್ನಾ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಮತ ಎಣಿಕೆಯನ್ನು ಮುಕ್ತ, ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ಜರುಗಿಸಲು ಅನುಕೂಲವಾಗುವಂತೆ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮ 1967ರ ನಿಯಮ 10 (ಬಿ) ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್‍ರಾಜ್ ಅಧಿನಿಯಮ 1993ರ ಪ್ರಕರಣ 308 ಎಸಿ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.

ಎಲ್ಲಾ ತಾಲೂಕು ಕೇಂದ್ರಗಳಲ್ಲಿರುವ ಮತ ಎಣಿಕೆ ಕೇಂದ್ರಗಳ 100 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಮಾತ್ರ ಇದೇ ಡಿಸೆಂಬರ್ 30 ರಂದು ಬೆಳಗಿನ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರರ ಪ್ರವೇಶವನ್ನು ನಿಷೇಧಿಸಿ ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 144ರನ್ವಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಜರುಗಲಿರುವ ಗ್ರಾಮೀಣ, ಪಟ್ಟಣ, ನಗರ ವ್ಯಾಪ್ತಿಯಲ್ಲಿ 5 ಅಥವಾ 5 ಕ್ಕಿಂತ ಹೆಚ್ಚು ಜನರು ಗುಂಪು-ಗುಂಪಾಗಿ ಕೂಡುವುದು, ಮೆರವಣಿಗೆ ಹಾಗೂ ಸಭೆ-ಸಮಾರಂಭ ಮಾಡುವುದನ್ನು ನಿಷೇಧಿಸಲಾಗಿದೆ. ಈ ಆದೇಶವು ಶವ ಸಂಸ್ಕಾರ, ಮದುವೆ ಹಾಗೂ ಧಾರ್ಮಿಕ ಮೆರವಣಿಗೆಗೆ ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.