ಡಿ.28ರಂದು ಮಾದಿಗ ಮುನ್ನಡೆ ಸಮಾವೇಶ: ಫರ್ನಾಂಡಿಸ್ ಹಿಪ್ಪಳಗಾಂವ

ಬೀದರ್:ಡಿ.25: ಈ ತಿಂಗಳ 28ರಂದು ಮಧ್ಯಾಹ್ನ 12.30 ಗಂಟೆಗೆ ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಮಾದಿಗ ಮುನ್ನಡೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ ತಿಳಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿ ಉದ್ದೇಸಿಸಿ ಮಾತನಾಡಿರುವ ಅವರು, ಅಂದಿನ ಸಮಾವೇಶವನ್ನು ಕೇಂದ್ರ ಸಚಿವ ನಾರಾಯಣಸ್ವಾಮಿ ಉದ್ಘಾಟಿಸಲಿದ್ದು, ಸಾನಿಧ್ಯವನ್ನು ಮಾದಾರ ಚನ್ನಯ್ಯ ಸ್ವಾಮಿಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಭಾಗವಹಿಸುವರು. ತನ್ನ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದರು.
ನ.11ರಂದು ಹೈದ್ರಾಬಾದ್‍ನಲ್ಲಿ ನಡೆದ ಸಮಾಜದ ರಾಷ್ಟ್ರಿಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರು ನಮ್ಮ ನ್ಯಾಯಿಕ ಹಕ್ಕಿಗಾಗಿ ನ್ಯಾ.ನಾರಿಮನ್ ಹಾಗೂ ಇತರರ ನೇತೃತ್ವದಲ್ಲಿ ಏಳು ಜನರ ತಜ್ಞರ ಸಮಿತಿ ರಚಿಸಿ ಮೀಸಲಾತಿ ಸಮಸ್ಯೆಗೆ ತಾರ್ಕಿಕ ಅಂತ್ಯ ನಿಡುವಲ್ಲಿ ಮುಂದಾಗಿರುವರು. ಜನೆವರಿ 17 2024ರಂದು ಸರ್ವೋಚ್ಛ ನ್ಯಾಯಾಲಯದಲ್ಲಿ ನಮ್ಮ ಹಕ್ಕಿಗಾಗಿ ಈ ಸಮಿತಿ ತಮ್ಮ ವಾದ ಮಂಡಿಸಲಿದೆ. ಇದರಲ್ಲಿ ನಮಗೆ ನ್ಯಾಯ ದೊರಕುವ ವಿಶ್ವಾಸವಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮ್ಮ ಹಕ್ಕಿಗಾಗಿ ಮುತಿವರ್ಜಿ ವಹಿಸಿರುವ ಬಿಜೆಪಿ ಪರ ನಿಲ್ಲುವುದಾಗಿ ಫರ್ನಾಂಡಿಸ್ ತಿಳಿಸಿದರು.
ಈ ತಿಂಗಳ 10ರಿಂದ 31ರ ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಸಮಾವೇಶ ಹಾಗೂ ಹೋರಾಟ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ನಮ್ಮ ಹಕ್ಕನ್ನು ವಿರೋಧಿಸುವ ಸಂಶಯವಿದೆ. ಸಮಾಜದ ಜಾಗೃತಿಗಾಗಿ ಸಮಾವೇಶ ಆಯೋಜಿಸಲಾಗುತ್ತಿದ್ದು, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ ಮಟ್ಟದಿಂದ ಐವರು ಬುದ್ದಿಜೀವಿಗಳು, ಸಾಹಿತ್ಯಾಸಕ್ತರು, ಸಮಾಜ ಚಿಂತಕರು ಭಾಗವಹಿಸಬಹುದಾಗಿದೆ ಎಂದವರು ಹೇಳಿದರು.
ಖರ್ಗೆಯವರಿಂದ ನಮ್ಮ ಬೇಡಿಕೆಗೆ ಹಿನ್ನಡೆ:- ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ್ ಖರ್ಗೆಯವರು ಮಾದಿಗರ ಏಳಿಗೆ ಸಹಿಸದೇ ನಮ್ಮ ನ್ಯಾಯಯುತ ಬೇಡಿಕೆಗೆ ತಣ್ಣೀರು ಎರಚುವ ಕಾರ್ಯ ಮಾಡುತ್ತಿರುವರು. ಅವರು ಅಧಿಕಾರದಲ್ಲಿದ್ದಾಗಲೆಲ್ಲ ನಮ್ಮ ನ್ಯಾಯಯುತ ಹಕ್ಕನ್ನು ತಿರಸ್ಕರಿಸುತ್ತ ಬಂದಿರುವ ಈ ಕಾಂಗ್ರೆಸ್ ಸರ್ಕಾರದ ಮೇಲೆ ನಮ್ಮ ವಿಶ್ವಾಸವಿಲ್ಲವೆಂದರು.
ನ್ಯಾಯವಾದಿ ದಯಾನಂದ ವಕೀಲ ಹಾಗೂ ಸುಧಾಕರ ಸೂರ್ಯವಂಶಿ ಮಾತನಾಡಿದರು.
ಪತ್ರಿಕಾ ಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ, ಜಿಲ್ಲಾ ಉಪಾಧ್ಯಕ್ಷ ಕಮಲಾಕರ ಎಲ್.ಹೆಗಡೆ, ಜಿಲ್ಲಾ ಕಾರ್ಯಧ್ಯಕ್ಷ ದತ್ತಾತ್ರಿ ಜ್ಯೋತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಮಿದಾಸ ಮೇಘಾ, ಸಂಘಟನಾ ಕಾರ್ಯದರ್ಶಿ ಜೈಶೀಲ ಕಲವಾಡೆ, ತಾಲೂಕಾಧ್ಯಕ್ಷ ಎಡಿಸನ್, ಹುಮನಾಬಾದ್ ತಾಲೂಕಾಧ್ಯಕ್ಷ ಗೊರಖ ನಿಂಬೂರ, ಕಮಲನಗರ ತಾಲೂಕಾಧ್ಯಕ್ಷ ವಿಜಯಕುಮಾರ ಸೂರ್ಯವಂಶಿ, ಭಾಲ್ಕಿ ತಾಲೂಕಾಧ್ಯಕ್ಷ ಸಚಿನ ಅಂಬೇಸಂಗವಿ, ಕರ್ನಾಟಕ ಮಾದಿಗ ಮಹಾ ಸಭೆ ಜಿಲ್ಲಾಧ್ಯಕ್ಷ ರವಿ ನಿಜಾಂಪುರೆ, ದಲಿತ ಮಾದಿಗ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಪರಮೇಶ್ವರ ಕಾಳಮಂದರಗಿ, ದಕ್ಷಿಣ ಕ್ಷೇತ್ರ ಅಧ್ಯಕ್ಷ ವೀರಶಟ್ಟಿ, ಬಸವಕಲ್ಯಾಣ ತಾಲೂಕಾಧ್ಯಕ್ಷ ನೀಲಕಂಠ ಭೇoಡೆ, ಸಮಾಜ ಮುಖಂಡ ಶಿವಕುಮಾರ ಸಿದೇಶ್ವರ, ತಾಲೂಕು ಕಾರ್ಯದರ್ಶಿ ದಯಾನಂದ ರೇಕುಳಗಿ, ಲಾಲಾಪ್ಪ ನಿರ್ಣ, ಮನೋಹರ ಉಡುಬಾಳ, ರಾಜಕುಮಾರ ಜ್ಯೋತಿ ಹಾಗೂ ಇತರರು ಉಪಸ್ಥಿತರಿದ್ದರು.
ಕಾರಜೋಳ ಮೇಲಿನ ಹಲ್ಲೆಗೆ ಸೂರ್ಯವಂಶಿ ಖಂಡನೆ:- ಇತ್ತಿಚೀಗೆ ಚಿತ್ರದುರ್ಗದಲ್ಲಿ ನಡೆದ ಸಮಾವೇಶದಲ್ಲಿ ನಮ್ಮ ಸಮಾಜದ ನಾಯಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮೇಲೆ ನಡೆದ ಹಲ್ಲೆ ರಾಜಕೀಯದಿಂದ ಕೂಡಿದ್ದು, ಇದನ್ನು ಮಾದಿಗ ಸಮಾಜ ಉಗ್ರವಾಗಿ ಖಂಡಿಸುತ್ತದೆ ಎಂದು ಮುಖಂಡ ಸುಧಾಕರ ಸೂರ್ಯವಂಶಿ ತಿಳಿಸಿದ್ದಾರೆ. ಅವರ ಮೇಲಿನ ಹಲ್ಲೆ ನಡೆಸಿದವರ ವಿರೂದ್ಧ ಸರ್ಕಾರ ರಾಜಕೀಯ ಮಾಡದೇ ನ್ಯಾಯಯುತವಾಗಿ ತನಿಖೆ ನಡೆಸಿ ತಪ್ಪಿತಸ್ತರ ವಿರೂದ್ಧ ಕ್ರಮ ಕೈಗೊಳ್ಳಬೇಕೆಂದು ಸುಧಾಕರ ಆಗ್ರಹಿಸಿದ್ದಾರೆ.