ಡಿ.26ರಿಂದ ಮುದನೂರಿನ ಕೋರಿಸಿದ್ದೇಶ್ವರ ಶಾಖಾ ಮಠದ ಜಾತ್ರಾ ಮಹೋತ್ಸವ

ಕೆಂಭಾವಿ:ನ.29: ಮುದನೂರು ಗ್ರಾಮದಲ್ಲಿ ಡಿ.26 ಹಾಗೂ 27 ರಂದು ನಡೆಯುವ ಸದ್ಗುರು ಕೋರಿಸಿದ್ದೇಶ್ವರರ 25 ನೆ ವರ್ಷದ (ರಜತ ಮಹೋತ್ಸವ) ಜಾತ್ರಾ ಮಹೋತ್ಸವ, ಕೋರಿಸಿದ್ದೇಶ್ವರ ಕಟ್ಟಡ ಕಾಮಗಾರಿಯ ಭೂಮಿಪೂಜೆ, ಶ್ರೀಮಠದ ಪೂಜ್ಯರ ಪಂಚವರ್ಷದ ವಾರ್ಷಿಕೋತ್ಸವ ನಿಮಿತ್ತ ನಡೆಯಲಿರುವ ಕಾರ್ಯಕ್ರಮಕ್ಕೆ ಶ್ರೀಶೈಲ್‍ದ ಜಗದ್ಗುರುಗಳು ಹಾಗೂ ನಾಲವಾರದ ಪೂಜ್ಯ ಶ್ರೀಗಳು ಆಗಮಿಸುವರು ಎಂದು ಮುದನೂರ ಕೋರಿಸಿದ್ದೇಶ್ವರ ಶಾಖಾ ಮಠದ ಪೀಠಾಧಿಪತಿ ಷ.ಬ್ರ.ಸಿದ್ದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಈ ಕುರಿತು ಮುದನೂರಿನ ಶ್ರೀ ಕೋರಿಸಿದ್ದೇಶ್ವರ ಶಾಖಾಮಠದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಹಾನ್ ವಚನಕಾರ ದಾಸಿಮಯ್ಯನವರಿಂದ ಪ್ರಸಿದ್ಧವಾದ ಮುದನೂರ ಗ್ರಾಮಕ್ಕೆ ಶ್ರೀಶೈಲ್ ಜಗದ್ಗುರುಗಳು ಆಗಮಿಸುತ್ತಿರುವದು ಗ್ರಾಮಕ್ಕೆ ಹೆಮ್ಮೆಯ ಸಂಗತಿ. ಈ ಕಾರ್ಯಕ್ರಮವನ್ನು ಗ್ರಾಮಸ್ಥರೆಲ್ಲ ಸೇರಿ ಅದ್ಧೂರಿಯಾಗಿ ಆಚರಿಸಬೇಕು. ಮುದನೂರ ಗ್ರಾಮದ ಕೀರ್ತಿಯನ್ನು ಎಲ್ಲೆಡೆ ಪಸರಿಸಬೇಕು. ಜಾತಿ, ಬೇಧ, ಮತ, ಪಂಥ ಎಲ್ಲವನ್ನು ಮೀರಿ ಕಾರ್ಯಕ್ರಮವನ್ನು ಗ್ರಾಮಸ್ಥರೆ ಮುಂದು ನಿಂತು ಮಾಡಬೇಕು ಎಂದು ಕೊರಿದರು.
ಗ್ರಾಮದ ಹಲವು ಮುಖಂಡರು ಮಾತನಾಡಿ, ರಜತ ಮಹೋತ್ಸವವನ್ನು ಅದ್ಧೂರಿಯಾಗಿ ಎಲ್ಲ ಜವಾಬ್ಧಾರಿಗಳನ್ನು ನಿರ್ವಹಿಸಿಕೊಂಡು ಯಶಸ್ವಿಗೊಳಿಸುತ್ತೆವೆ ಎಂದು ತಿಳಿಸಿದರು. ಡಿ.ಸಿ.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಚೆನ್ನಪ್ಪಗೌಡ ಬೆಕಿನಾಳ, ಸಿದ್ದನಗೌಡ, ಪ್ರಭುಗೌಡ ಹರನಾಳ, ರಮೇಶ ಚೌದ್ರಿ, ಚೆನ್ನಯ್ಯಸ್ವಾಮಿ, ನಾಗಯ್ಯ ದೇಸಾಯಿಗುರು ಹುಣಸಗಿ, ಶಿವರಾಜ ಖಾನಗೌಡರ, ಈರಣ್ಣ ಸಾಹುಕಾರ, ಪಾಣಿ ಸಾಹುಕಾರ ಸೇರಿದಂತೆ ಅನೇಕರಿದ್ದರು.
ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಉಸ್ತುವಾರಿ ಸಮಿತಿಯನ್ನು ರಚಿಸಲಾಯಿತು.
ದೇವು (ಡೆವಿಡ್) ನಿರೂಪಿಸಿದರು. ಭೀಮರೆಡ್ಡಿ ಬೆಕಿನಾಳ ಸ್ವಾಗತಿಸಿದರು. ವೀರೇಶ ದೇಸಾಯಿ ವಂದಿಸಿದರು.