ಡಿ.23 ರಿಂದ ನಗರದಲ್ಲಿ ನೀನಾಸಂ, ಧಾತ್ರಿ ಸಂಸ್ಥೆಗಳಿಂದ ನಾಟಕ ಪ್ರದರ್ಶನ

(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಡಿ.21: ಇಲ್ಲಿನ ಆಟಲ್ ಬಿಹಾರಿ ವಾಜಪೇಯಿ ನಗರದ ರಂಗತೋರಣದ ನೂತನ  ಕಲಾಮಂದಿರದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ಡಿ.23 ರಿಂದ 25 ರ ವರೆಗೆ ಮೂರು ದಿನಗಳ ಕಾಲ ನೀನಾಸಂ ಹಾಗೂ  ಧಾತ್ರಿ ರಂಗ ಸಂಸ್ಥೆಗಳ ನಾಟಕಗಳ ಪ್ರದರ್ಶನವನ್ನು  ಹಮ್ಮಿಕೊಂಡಿದೆ ಎಂದು ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹಾಗು  ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ ಅವರು ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.ಇದೇ 23 ಶನಿವಾರ ರಾತ್ರಿ  ಸೂರುತಿಯ ಸಂಬಂಧ ಎಂಬ ನಾಟಕ ಪ್ರದರ್ಶನ ಹಮ್ಮಿಕೊಂಡಿದ್ದು. ಈ ನಾಟಕವನ್ನು ಮಹಾಂತೇಶ್ ರಾಮದುರ್ಗರವರು 10 ವರ್ಷಗಳ ಹಿಂದೆಯೇ ಬರೆದಿದ್ದರೂ, ಈಗಿನ ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳಿಗೆ ಸರಿಹೊಂದುತ್ತದೆ ಕರ್ನಾಟಕ ನಾಟಕ ಆಕಾಡೆಮಿಯ ಯುವ ಪ್ರಶಸ್ತಿ ಪುರಸ್ಕೃತ ಮಹಾಂತೇಶ ರಾಮದುರ್ಗರವರು ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆಗಾಗಿ ಈ ನಾಟಕವನ್ನು ನಿರ್ದೇಶಿಸಿದ್ದಾರೆ.ಅಂದು ಸಂಜೆ 6.30ಕ್ಕೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಎಸ್. ಮಲ್ಲನಗೌಡ ಅವರು ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಾಜಪೇಯಿ ನಗರದ ಮುಖಂಡ ಭೀಮೇಶಸ್ವಾಮಿ ಹಾಗೂ ಇಂಜಿನಿಯರ್  ಸಂಜೀವ ಪ್ರಸಾದರವರು ಪಾಲ್ಗೊಳ್ಳಲಿದ್ದಾರೆ.ಡಿಸೆಂಬರ್ 24 ರಂದ  ನೀನಾಸಮ್ ಸಂಸ್ಥೆಯಿಂದ  ಹುಲಿಯ ನೆರಳು  ನಾಟಕ ಪ್ರದರ್ಶನಗೊಳ್ಳಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ರಚಿಸಿರುವ ಈ ನಾಟಕವನ್ನು ಹಿರಿಯ ರಂಗಕರ್ಮಿ  ಕೆ.ಜಿ.ಕೃಷ್ಣಮೂರ್ತಿ ರವರು ನಿರ್ದೇಶಿಸಿದ್ದಾರೆ.ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖಂಡರಾದ  ಕೆ.ಎ.ವೇಮಣ್ಣ,  ಹೊನ್ನನಗೌಡ ಹಾಗೂ ಪತ್ರಕರ್ತ  ಶಶಿಧರ ಮೇಟಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಡಿ.25 ರಂದು  ಲೂಹಿ ನಕೋಸಿ ಬರೆದ  ‘ದ ರಿದಮ್ ಆಫ್ ವಯಲೆನ್ಸ್’ ನಾಟಕ ಪ್ರದರ್ಶನ ಇದ್ದು.ಹಿರಿಯ ರಂಗಕರ್ಮಿ  ನಟರಾಜ ಹೊನ್ನವಳ್ಳಿ ಯವರು ಕನ್ನಡಕ್ಕೆ ಅನುವಾದಿಸಿದ್ದು, ಹೆಚ್.ಕೆ.ಶ್ವೇತಾರಾಣಿ ರವರು ನಿರ್ದೇಶಿಸಿದ್ದಾರೆ.ಸಮಾರೋಪ ಸಮಾರಂಭದಲ್ಲಿ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿಯ ಕೆ.ಪೊಂಪನಗೌಡ, ವಿಜ್‌ಡಮ್ ಲ್ಯಾಂಡ್ ಶಾಲೆಯ  ಎಸ್.ವೈ. ಕಟ್ಟೇಗೌಡ ಹಾಗೂ ರಂಗ ಕಲಾವಿದ  ವಿ.ರಾಮಚಂದ್ರ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.