ಡಿ.20 ರಿಂದ ನಗರದಲ್ಲಿ ಡಬ್ಬಲ್ ಡೆಕ್ಕರ್ ಅಂಬಾರಿ ಬಸ್ ಸಂಚಾರ

ಮೈಸೂರು, ನ.20: ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮೈಸೂರಿನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಒತ್ತು ನೀಡಲು ಡಬ್ಬಲ್ ಡೆಕ್ಕರ್ ಅಂಬಾರಿ ಬಸ್ ಡಿ.20 ರಿಂದ ನಗರದಲ್ಲಿ ಸಂಚರಿಸಲಿದೆ.
ನಗರದಲ್ಲಿರುವ ಪಾರಂಪರಿಕ ಕಟ್ಟಡಗಳು, ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಅಂಬಾರಿ ತೆರಳಲಿದೆ. ಇದು ದಸರಾ ಸಂದರ್ಭದಲ್ಲಿ ಸಂಚರಿಸಬೇಕಾಗಿತ್ತು. ಇದಕ್ಕೋಸ್ಕರವಾಗಿಯೇ ನಗರದಲ್ಲಿ ಅಡ್ಡಿಯಾಗಿದ್ದ ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲಾಗಿತ್ತು. ಆದರೆ ದಸರಾ ಸೀಪಾಲಂಕಾರದಿಂದ ಬಸ್ ಸಂಚರಿಸಲು ಅಡ್ಡಿಯುಂಟಾದ ಹಿನ್ನೆಲೆಯಲ್ಲಿ ಅಂಬಾರಿಗೆ ಸಂಚರಿಸಲು ಸಾಧ್ಯವಾಗಿರಲಿಲ್ಲ.
ಜೆಎಲ್ ಬಿ ರಸ್ತೆಯ ಮಯೂರ ಹೊಯ್ಸಳ ಹೋಟೆಲ್ ಆವರಣದಿಂದ ಹೊರಡಲಿರುವ ಅಂಬಾರಿ ಬಸ್ ಜಿಲ್ಲಾಧಿಕಾರಿಗಳ ಕಛೇರಿ, ಕ್ರಾಫರ್ಡ್ ಭವನ, ಮಾನಸಗಂಗೋತ್ರಿ ಪ್ರವೇಶದ್ವಾರ, ಓರಿಯಂಟಲ್ ರಿಸರ್ಚ್ ಸೆಂಟರ್, ರಾಮಸ್ವಾಮಿ ವೃತ್ತ, ಸರ್ಕಾರಿ ಸಂಸ್ಕೃತ ಪಾಠಶಾಲೆ , ಪಾಲಿಕೆ ಕಛೇರಿ, ಜಗನ್ಮೋಹನ ಅರಮನೆ, ಕೆ.ಆರ್.ವೃತ್ತ, ಪುರಭವನ, ಗಾಂಧಿವೃತ್ತ, ದೊಡ್ಡ ಗಡಿಯಾರ, ಅರಮನೆ ಉತ್ತರ ದ್ವಾರ, ಹಾರ್ಡಿಂಜ್ ವೃತ್ತ, ಗ್ಲಾಸ್ ಹೌಸ್, ಮೈಸೂರು ಮೃಗಾಲಯ, ಲಲಿತ್ ಮಹಲ್ ಪ್ಯಾಲೇಸ್, ಫೌಂಟೇನ್ ವೃತ್ತ, ಎಲ್ ಐಸಿ ಹೈವೇ ವೃತ್ತ, ಸರ್ಕಾರಿ ಆಯುರ್ವೇದ ಕಾಲೇಜು ವೃತ್ತ, ರೈಲ್ವೆ ನಿಲ್ದಾಣ ವೃತ್ತ, ಮೂಲಕ ಮತ್ತೆ ಮಯೂರ ಹೊಯ್ಸಳ ಹೋಟೆಲ್ ಆವರಣಕ್ಕೆ ಮರಳಲಿದೆ.