ಡಿ.18ರಂದು ಜಿಲ್ಲಾದ್ಯಂತ ಲೋಕ ಅದಾಲತ್

ಬಾಕಿಯಿರುವ ಪ್ರಕರಣಗಳ ರಾಜೀ ಸಂಧಾನದ ಮೂಲಕ ಇತ್ಯರ್ಥ: ಎಂ.ಎಲ್.ರಘುನಾಥ್‍
ಮೈಸೂರು, ನ.8:- ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರ ನಿರ್ದೇಶನದಂತೆ ಡಿಸೆಂಬರ್ 18ರಂದು ಮೈಸೂರು ಜಿಲ್ಲೆಯನ್ನೊಳಗೊಂಡಂತೆ ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಲೋಕ ಅದಾಲತ್ ನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ತಿಳಿಸಿದರು.
ಮೈಸೂರು ಮಳಲವಾಡಿಯ ನ್ಯಾಯಾಲಯಗಳ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಮೈಸೂರು ನಗರ ಮತ್ತು ತಾಲೂಕುಗಳಲ್ಲಿನ ನ್ಯಾಯಾಲಯಗಳಲ್ಲಿ ಒಟ್ಟು 1,03,472 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು ಅವುಗಳ ಪೈಕಿ 49,246 ಸಿವಿಲ್ ಪ್ರಕರಣಗಳು ಹಾಗೂ 54,226 ಕ್ರಿಮಿನಲ್ ಪ್ರಕರಣಗಳಿದ್ದು ಈ ಪ್ರಕರಣಗಳ ಪೈಕಿ ರಾಜಿ ಆಗುವ ಸಾಧ್ಯತೆ ಪ್ರಕರಣಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು ವರ್ಗಾವಾರು ಪ್ರಕರಣಗಳನ್ನು ರಾಜಿ ಇತ್ಯರ್ಥಕ್ಕಾಗಿ ಆಯ್ಕೆ ಮಾಡಲಾಗಿರುತ್ತದೆ ಎಂದರು.
ಮೋಟಾರು ವಾಹನ ಅಪಘಾತ ಪ್ರಕರಣಗಳು 3,780, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು 3,019, 138 ಎನ್ ಐ ಆಕ್ಟ್ (ಚೆಕ್ ಬೌನ್ಸ್) ಒಟ್ಟು 13,240ಪ್ರಕರಣಗಳಿದ್ದು ಅವುಗಳ ಪೈಕಿ ಅಂದಾಜು 2,914, ನ್ಯಾಯಾಲಯಗಳಲ್ಲಿ ದಾಖಲಾಗದೇ ಇರುವಂತಹ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳು 119, ಒಟ್ಟು 9,832 ಪ್ರಕರಣಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜಿಯಾಗುವಂತಹ ಯಾವುದೇ ಪ್ರಕರಣಗಳನ್ನು ಕಕ್ಷಿಗಾರರ ವಿನಂತಿಯ ಮೇರೆಗೆ ಸಂಬಂಧಪಟ್ಟ ನ್ಯಾಯಾಲಯಗಳಲ್ಲಾಗಲೀ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಸಂಬಂಧಪಟ್ಟ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿದಲ್ಲಿ ಅಂತಹ ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ ಭೂತೆ ಮತ್ತಿತರರು ಉಪಸ್ಥಿತರಿದ್ದರು.