ಡಿ.14ರಂದು ಅನಿರ್ದಿಷ್ಟ ಕಾಲದ ಹಗಲು ರಾತ್ರಿ ಚಳುವಳಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಡಿ.10: ವಿದ್ಯುತ್ ಇಲಾಖೆಯ ವತಿಯಿಂದ ರೈತ ಸಮುದಾಯಕ್ಕೆ ಆಗುತ್ತಿರುವ ಕಿರುಕುಳದ ವಿರುದ್ದ ಡಿಸಂಬರ್ 14 ರ ಗುರುವಾರ ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಸೆಸ್ಕಾಂ ವಿಭಾಗೀಯ ಕಛೇರಿಯ ಮುಂದೆ ಅನಿರ್ಧಿಷ್ಟ ಕಾಲದ ಹಗಲು ರಾತ್ರಿ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಪ್ರಕಟಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ರೈತ ಚಳುವಳಿ ಕುರಿತ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ರಾಜ್ಯ ಸರ್ಕಾರ ಮತ್ತು ಸೆಸ್ಕಾಂ ಅಧಿಕಾರಿಗಳ ರೈತ ವಿರೋಧಿ ನೀತಿಯನ್ನು ಖಂಡಿಸಿದರು.
ತಾಲೂಕಿನಲ್ಲಿ 2019 ರಿಂದ 2023ರ ವರೆಗೆ ನೂರಾರು ರೈತರು ನಿಗಧಿತ ಹಣಕಟ್ಟಿ ವಿದ್ಯುತ್ ಟಿ.ಸಿ ಗಾಗಿ ಕಾಯುತ್ತಿದ್ದಾರೆ. ಆದರೆ ವಿದ್ಯುತ್ ಇಲಾಖೆ ಯಾವುದೇ ರೈತರಿಗೂ ಒಂದೇ ಒಂದು ಹೊಸ ಟಿ.ಸಿ ನೀಡಿಲ್ಲ. ಇದರಿಂದ ಕೃಷಿಪಂಪ್ ಸೆಟ್ ಆಧಾರಿತ ರೈತರು ಸಂಕಷ್ಠಕ್ಕೆ ಸಿಲುಕಿದ್ದಾರೆ. ಬಹುತೇಕ ಕಡೆ ಓವರ್ ಲೋಡ್ ನಿಂದ ಟಿ.ಸಿ ಗಳು ಸುಟ್ಟುಹೋಗಿ ರೈತರು ಬವಣೆಪಡುತ್ತಿದ್ದಾರೆ. 11 ಕೆ.ವಿ ವಿದ್ಯುತ್ ಲೈನ್ ಹಾದುಹೋಗರಿವ ಕಡೆ 500 ಮೀಟರ್ ಪರಿದಿಯಲ್ಲಿರುವ ಪಂಪ್ ಸೆಟ್ಟುಗಳಿಗೆ ಮಾತ್ರ ಹೊಸ ಟಿ.ಸಿ ಅಳವಡಿಕೆಗೆ ಕ್ರಮವಹಿಸಲು ರಾಜ್ಯ ಸರ್ಕಾರ ಸೂಚಿಸಿದ್ದು ಉಳಿದ ಕಡೆ ಸೋಲಾರ್ ಅಳವಡಿಕೆಯನ್ನು ಉತ್ತೇಜಿಸಲು ಸರ್ಕಾರ ಯೋಜಿಸಿದೆ ಎನ್ನುವ ಮಾತುಗಳು ವಿದ್ಯುತ್ ಇಲಾಖಾ ವಲಯದಿಂದಲೇ ಕೇಳಿ ಬರುತ್ತಿವೆ. ಇದು ನಿಜವಾದರೆ ಪಂಪ್ ಸೆಟ್ ಅಧಾರಿತ ರೈತರು ಕೃಷಿಯನ್ನೆ ಬಿಡಬೇಕಾದ ಸನ್ನಿವೇಶ ಎದುರಾಗಲಿದೆ. ಚಳಿಗಾಲದಲ್ಲಿ ಮತ್ತು ಮೋಡ ಕವಿದ ವಾತಾವರಣದ ಸಂದರ್ಭಲ್ಲಿ ಸೋಲಾರ್ ವಿದ್ಯುತ್ ರೈತರ ಉಪಯೋಗಕ್ಕೆ ಬರುವುದಿಲ್ಲ. ರಾಜ್ಯ ಸರ್ಕಾರ ತಕ್ಷಣವೇ ತನ್ನ ನೀತಿಯನ್ನು ಮರು ಆಲೋಚಿಸಿ ಹಣಕಟ್ಟಿರುವ ಎಲ್ಲಾ ರೈತರಿಗೂ ತಕ್ಷಣವೇ ನೂತನ ವಿದ್ಯುತ್ ಪರಿವರ್ತಕ(ಟಿ.ಸಿ)ಗಳನ್ನು ಅಳವಡಿಸಿಕೊಡುವಂತೆ ಪುಟ್ಟೇಗೌಡ ಒತ್ತಾಯಿಸಿದರು.
ವಿದ್ಯುತ್ ಅವಘಡಗಳಿಗೆ ಬಲಿಯಾದ ರೈತರು ಮತ್ತು ರೈತ ಕುಟುಂಬದ ಜಾನುವಾರುಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿದ್ಯುತ್ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿದೆ. ಬೆಂಗಳೂರು ಮಹಾನಗರದಲ್ಲಿ ವಿದ್ಯುತ್ ಅವಘಡಗಳಿಗೆ ಬಲಿಯಾದವರಿಗೆ ರಾಜ್ಯ ಸರ್ಕರ ತಕ್ಷಣವೇ ಪರಿಹಾರ ನೀಡುತ್ತಿದೆ. ಆದರೆ ಗ್ರಾಮೀಣ ಪ್ರದೆಶದಲ್ಲಿ ವಿದ್ಯುತ್ ಅವಘಡಕ್ಕೆ ಬಲಿಯಾದ ರೈತ ಕುಟುಂಬದ ಸದಸ್ಯರಿಗೆ ವರ್ಷಾಕಾಲ ಕಳೆದರೂ ಪರಿಹಾರ ನೀಡಿಲ್ಲ. ನಗರ ವಾಸಿಗಳ ಜೀವಕ್ಕಿರುವ ಬೆಲೆ ಅನ್ನದಾತರ ಕುಟುಂಬಕ್ಕಿಲ್ಲ. ಪರಿಹಾರ ನೀಡಿಕೆಯಲ್ಲಿನ ತಾರತಮ್ಯ ನೀತಿ ತೊಲಗಬೇಕು ಮತ್ತು ತಕ್ಷಣವೇ ವಿದ್ಯುತ್ ಅವಘಡಕ್ಕೆ ತುತ್ತಾದ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕು. ರಾಜ್ಯದಲ್ಲಿ ವಿದ್ಯುತ್ ಅಭಾವದ ಹೆಸರಿನಲ್ಲಿ ರೈತರಿಗೆ ಅನಗತ್ಯ ಲೋಡ್ ಶೆಡ್ಡಿಂಗ್ ಮಾಡಿ ತೊಂದರೆ ಕೊಡಲಾಗುತ್ತಿದೆ. ವಿದ್ಯುತ್ ಅಭಾವವಿರುವುದರಿಂದ ಹೆಚ್.ಟಿ ಬಳಕೆದಾರ ಗ್ರಾಹಕರಿಗೂ ಶೇ.25 ರಷ್ಟು ವಿದ್ಯುತ್ ಖೋತಾ ಮಾಡಿ ಅದನ್ನು ಗ್ರಾಮೀಣ ಪ್ರದೇಶದ ರೈತರಿಗೆ ಪೂರೈಕೆ ಮಾಡುವಂತೆ ಪುಟ್ಟೇಗೌಡ ಆಗ್ರಹಿಸಿದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಮುದುಗೆರೆ ಎಂ.ವಿ.ರಾಜೇಗೌಡ, ರಾಜ್ಯ ರೈತಸಂಘದ ಮುಖಂಡ ಕೆ.ಆರ್.ಜಯರಾಂ, ರೈತ ಮುಖಂಡರಾದ ಕರೋಟಿ ತಮ್ಮಯ್ಯ, ಕೃಷ್ಣಾಪುರ ರಾಜಣ್ಣ, ಬಸವರಾಜು, ಸ್ವಾಮೀಗೌಡ, ನರಸಿಂಹೇಗೌಡ, ಮಹೇಶ್ ಮತ್ತಿತರರಿದ್ದು ಮಾತನಾಡಿದರು.