ಡಿ.12ರಂದು ಎಂ.ಎಸ್.ಎಂ.ಇ-ಸ್ಟಾರ್ಟ್ ಅಪ್ ಸಮಾವೇಶ

ಕಲಬುರಗಿ:ಡಿ.10: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಹಯೋಗದಲ್ಲಿ ಇದೇ ಡಿ.12ರಂದು ಬೆಳಗ್ಗೆ 10ಕ್ಕೆ ಎಂ.ಎಸ್.ಎಂ.ಇ ಮತ್ತು ಸ್ಟಾರ್ಟ್-ಅಪ್ ಸಮಾವೇಶ ನಡೆಯಲಿದೆ ಎಂದು ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್ ಹಾಗೂ ಐಸಿಎಐ ಅಧ್ಯಕ್ಷ ಸಿಎ ಮಲ್ಲಿಕಾರ್ಜುನ ವೀರಣ್ಣ ಮಹಾಂತಗೋಳ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ ಎಂದರು.
ಚೆನ್ನೈನ ಎಸ್.ಐ.ಆರ್.ಸಿ ಆಫ್ ಐಸಿಎಐ ಅಧ್ಯಕ್ಷ ಸಿಎ ಪನ್ನಾರಾಜ್, ಸಮಾವೇಶದ ನಿರ್ದೇಶಕ ಸಿಎ ಎಸ್.ಎಸ್.ನಾಯಕ್, ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್ ಹಾಗೂ ಕಾರ್ಯದರ್ಶಿ ಮಂಜುನಾಥ ಜೇವರ್ಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಮಾವೇಶದಲ್ಲಿ ವಿವಿಧ ತಾಂತ್ರಿಕ ಉಪನ್ಯಾಸಗಳು ನಡೆಯಲಿದ್ದು, ಎಂ.ಎಸ್.ಎಂ.ಇ ಮತ್ತು ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್, ಭಾರತದಲ್ಲಿ ಸ್ಟಾರ್ಟ್-ಅಪ್ ಇಕೋಸಿಸ್ಟಮ್ ಮತ್ತು ಫಂಡಿಂಗ್ ಆಯ್ಕೆಗಳು, ಆಹಾರ ಸಂಸ್ಕರಣೆ ಮತ್ತು ಕೃಷಿ ಉದ್ಯಮಗಳಿಗೆ ಅವಕಾಶಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಮತ್ತು ಎನ್.ಎಸ್.ಐ.ಸಿಯಿಂದ ಎಂ.ಎಸ್.ಎಂ.ಇಗಳಿಗೆ ಯೋಜನೆಗಳು ಹಾಗೂ ಪೆÇ್ರೀತ್ಸಾಹಗಳು, ಎಂ.ಎಸ್.ಎಂ.ಇಗಳಿಗೆ ಫಂಡಿಂಗ್ ಆಯ್ಕೆಗಳು, ಎಂ.ಎಸ್.ಎಂ.ಇ ಟೌನ್ ಹಾಲ್-ತಜ್ಞರೊಂದಿಗೆ ಸಂವಾದ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಎಂ.ಎಸ್.ಎಂ.ಇ ಟೌನ್ ಹಾಲ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಂದಿಗೆ ನೇರ ಸಂವಾದ ಆಯೋಜಿಸಲಾಗುತ್ತಿದ್ದು ವಿವಿಧ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಮತ್ತು ಕೆ.ಎಸ್.ಎಫ್.ಸಿ ಪರಿಣತರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಚಾರ್ಟರ್ಡ್ ಅಕೌಂಟೆಂಟ್ ಗಳು, ಶಿಕ್ಷಣ ತಜ್ಞರು, ಎಂ.ಎಸ್.ಎಂ.ಇ ಉದ್ಯಮಿಗಳು, ಚಿಲ್ಲರೆ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದರು.
ಉದ್ಯಮಗಳಿಗೆ ವಿವಿಧ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ಲಭಿಸುವ ಸಾಲದ ವ್ಯವಸ್ಥೆಯ ಕುರಿತು ಸಹ ಸಮಾವೇಶದಲ್ಲಿ ಅಗತ್ಯ ಮಾಹಿತಿ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಐಸಿಎಐ ಕಾರ್ಯದರ್ಶಿ ಸಿಎ ಮಾಣಿಕ್ ರಮೇಶ್ ಮಂದಕನಳ್ಳಿ, ಕೆಕೆಸಿಸಿಐ ಕಾರ್ಯದರ್ಶಿ ಮಂಜುನಾಥ ಜೇವರ್ಗಿ ಇದ್ದರು.


ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ

ಡಿ.12ರಂದು ನಡೆಯಲಿರುವ ಎಂ.ಎಸ್.ಎಂ.ಇ ಮತ್ತು ಸ್ಟಾರ್ಟ್-ಅಪ್ ಸಮಾವೇಶದ ಭಾಗವಾಗಿ ಅಂದು ಸಂಜೆ 6ಕ್ಕೆ ಅವಾರ್ಡ್ ನೈಟ್ ಕಾರ್ಯಕ್ರಮ ನಡೆಯಲಿದೆ ಎಂದು ಸಿಎ ಮಲ್ಲಿಕಾರ್ಜುನ ಹಾಗೂ ಸಿಎ ಮಾಣಿಕ್ ರಮೇಶ್ ಮಂದಕನಳ್ಳಿ ತಿಳಿಸಿದರು.
ಉದ್ಯಮ ಕ್ಷೇತ್ರದ 20 ವಲಯಗಳಲ್ಲಿ ಗಣನೀಯ ಸಾಧನೆ ತೋರಿದ ಉದ್ಯಮಿಗಳಿಗೆ ಬಿಸಿನೆಸ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ನಾವೀನ್ಯತೆ, ನಾಯಕತ್ವ, ಸಮರ್ಪಣಾ ಮನೋಭಾವ ಮತ್ತು ಬದ್ಧತೆಯನ್ನು ತೋರಿದ ಎಂ.ಎಸ್.ಎಂ.ಇ ಮತ್ತು ಸ್ಟಾರ್ಟ್-ಅಪ್ ಉದ್ಯಮಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ನುಡಿದರು.
ಚೆನ್ನೈನ ಎಸ್.ಐ.ಆರ್.ಸಿ ಆಫ್ ಐಸಿಎಐ ಅಧ್ಯಕ್ಷ ಸಿಎ ಪನ್ನಾರಾಜ್, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಮಾನೆ ಜಗದೀಶ್ ಪ್ರಸಾದ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಉಪಪ್ರಾದೇಶಿಕ ವ್ಯವಸ್ಥಾಪಕ ಶ್ರೀನಿವಾಸ ಸಜ್ಜನ್, ಕಲಬುರಗಿ ವಿಭಾಗದ ಸಹಾಯಕ ಆಯುಕ್ತ ಎಂ.ಶಿವಬಾಲನ್ ಸಂಜೆಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.