ಡಿ.10 ರಂದು ಸಂಜೀವಿನಿ ನೌಕರರ ಬೃಹತ್ ಸಮಾವೇಶ

ಕಲಬುರಗಿ:ಡಿ.08: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಡಿಸೆಂಬರ್ 10ರಂದು ಬೆಳಿಗ್ಗೆ 10-30ಕ್ಕೆ ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿಗಳ ಹಕ್ಕೊತ್ತಾಯಗಳನ್ನು ಈಡೇರಿಸಲು ಕೋರಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಹೋರಾಟಗಾರ್ತಿ ಕೆ. ನೀಲಾ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಗಳಾಗಿ ಆಗಮಿಸುವ ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಬೇಡಿಕೆಗಳನ್ನು ಈಡೇರಿಸಲು ಪ್ರಸ್ತಾಪಿಸಲಾಗುವುದು ಎಂದರು.
ಸಂಜೀವಿನಿ ನೌಕರರಿಗೆ ನೇಮಕಾತಿ ಆದೇಶವನ್ನು ತಕ್ಷಣವೇ ಕೊಡುವಂತೆ, ಬಾಕಿ ಉಳಿಸಿಕೊಂಡ ಗೌರವಧನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ, ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಒತ್ತಾಯಿಸಿದ ಅವರು, ಈಗಾಗಲೇ ಮೂರ್ನಾಲ್ಕು ಬಾರಿ ಒಂದು ವಾರ ಕಾಲ ಬೇರೆ, ಬೇರೆ ವಿಷಯಗಳಿಗೆ ಸಂಬಂಧಿಸಿ ಗಣತಿ ಕಾರ್ಯದಲ್ಲಿ ತೊಡಗಿದ್ದರೂ ಯಾವುದೇ ಭತ್ಯೆಯನ್ನು ಕೊಟ್ಟಿಲ್ಲ. ದಿನಭತ್ಯೆ 500ರೂ.ಗಳಂತೆ ಗಣತಿ ಕಾರ್ಯದ ಎಲ್ಲ ದಿನಗಳಿಗೆ ತಕ್ಷಣವೇ ಹಣವನ್ನು ಬಿಡುಗಡೆ ಮಾಡುವಂತೆ, ಬಿಡುಗಡೆ ಆಗಿದ್ದರೂ ನೀಡದಿರುವ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ರಾಜ್ಯಾದ್ಯಂತ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೌಚಾಲಯ, ಪೀಠೋಪಕರಣ ಹಾಗೂ ಗಣಕಯಂತ್ರಗಳ ಸಹಿತ ಕಚೇರಿಗಳನ್ನು ಒದಗಿಸುವಂತೆ, ತಕ್ಷಣವೇ ಜಾರಿಗೆ ಬರುವಂತೆ ಪುಸ್ತಕ ಬರಹಗಾರರಿಗೆ 15000ರೂ.ಗಳು, ಸಂಪನ್ಮೂಲ ಸಹಾಯಕರಿಗೆ 13000ರೂ.ಗಳು, ವಿವಿಧ ಸಖಿ ಕಾರ್ಯಕರ್ತರಿಗೆ 8000ರೂ.ಗಳ ವೇತವನ್ನು ಹೆಚ್ಚಿಸುವಂತೆ, ಪ್ರಯಾಣ ಹಾಗೂ ದಿನ ಭತ್ಯೆಗಳನ್ನು ಮತ್ತು ಮೊಬೈಲ್ ಹಾಗೂ ಅವುಗಳಿಗೆ ಅಗತ್ಯವಾದ ಉಚಿತ ಕರೆನ್ಸಿ ಒದಗಿಸುವಂತೆ, ಅದೇ ರೀತಿ ಭವಿಷ್ಯ ನಿಧಿ ಯೋಜನೆಯನ್ನು ಮತ್ತು ಇಎಸ್‍ಐ ಸೌಲಭ್ಯ ಜಾರಿಗೊಳಿಸಿ, ಉಚಿತ ವಿಮಾ ಸೌಲಭ್ಯ ಒದಗಿಸುವಂತೆ ಅವರು ಒತ್ತಾಯಿಸಿದರು.
ಮಹಿಳಾ ಒಕ್ಕೂಟದ ಹಾಗೂ ಸ್ವಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ಮಾಸಿಕ ಪ್ರೋತ್ಸಾಹ ಧನವಾಗಿ ತಲಾ 2000ರೂ.ಗಳನ್ನು ಕೊಡುವಂತೆ, ಸ್ವಸಹಾಯ ಗುಂಪುಗಳಿಗೆ ಅವಶ್ಯವಿರುಷ್ಟು ಐದು ವರ್ಷಗಳ ಕಾಲ ಬಡ್ಡಿ ರಹಿತ ಸಾಲ ವಿತರಿಸುವಂತೆ, ಕಚೇರಿಗಳಲ್ಲಿ ಶೌಚಾಲಯ ಹಾಗೂ ಪೀಠೋಪಕರಣಗಳು ಮತ್ತು ಗಣಕಯಂತ್ರಗಳನ್ನು ಒದಗಿಸುವಂತೆ, ಮಹಿಳೆಯರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಅನುದಾನವನ್ನು ಮೀಸಲಿಡುವಂತೆ, ಒಂಟಿ ಮಹಿಳೆಯರು, ಪತಿ ಸತ್ತ ಮಹಿಳೆಯರು, ಸಂತ್ರಸ್ತ ಮಹಿಳೆಯರು, ಅಂಗವಿಕಲ ಮಹಿಳೆಯರಿಗೆ ಕನಿಷ್ಠ ಮಾಸಿಕ 5000ರೂ.ಗಳ ನೆರವು ನೀಡುವಂತೆ, ಪತಿ ಸತ್ತ, ಅಂಗವಿಕಲ ಮತ್ತು ದೇವದಾಸಿ ಯುವ ಮಹಿಳೆಯರ ಮರು ಮದುವೆಗೆ ಪ್ರೋತ್ಸಾಹ ಧನ ಒದಗಿಸುವಂತೆ, ಪ್ರತಿಯೊಬರಿಗೂ ನಿವೇಶನ ಸಹಿತ ಮನೆಯನ್ನುಒದಗಿಸುವಂತೆ, ಸರ್ಕಾರಿ ನೌಕರಿಗಳಲ್ಲಿ ಆದ್ಯತೆ ಮೇರೆಗೆ ನೌಕರಿ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಈಗಾಗಲೇ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ನಿಯೋಗದ ಮೂಲಕ ಮನವಿ ಸಲ್ಲಿಸಲಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿ ಸೇರಿದಂತೆ ಕೇವಲ ಮೂರು ಹುದ್ದೆಗಳಲ್ಲಿ ಮಾತ್ರ ನೌಕರರು ಇದ್ದು, ಉಳಿದವರು ಗೌರವಧನದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿಯೂ ಸಂಜೀವಿನಿ ನೌಕರರು ಸಾಕಷ್ಟು ಕೆಲಸ, ಕಾರ್ಯಗಳನ್ನು ಮಾಡಿದರೂ ಸಹ ಅವರಿಗೆ ಅತ್ಯಂತ ಕಡಿಮೆ ಗೌರವಧನ ಕೊಡಲಾಗುತ್ತಿದೆ. ಆದ್ದರಿಂದ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ವಿಧಾನಸೌಧದ ಮುಂದೆ ಕಳೆದ ಫೆಬ್ರವರಿ 13ರಂದು 20000ಕ್ಕೂ ಹೆಚ್ಚು ನೌಕರರು ಪ್ರತಿಭಟನೆ ಮಾಡಿದ್ದಾರೆ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಸಮಾವೇಶದ ಮೂಲಕ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಜೀವಿನಿ ನೌಕರರ ಸಂಘದ ಅಧ್ಯಕ್ಷೆ ಕಾಂ. ನಂದಾದೇವಿ ಮಂಗೊಂಡಿ, ಕಾರ್ಯದರ್ಶಿ ಚಂದ್ರಕಲಾ ಸರಸಂಭಾ, ಖಜಾಂಚಿ ಇರ್ಫಾನ್, ಲಕ್ಷ್ಮೀ ಚಿಂಚೋಳಿ, ಸುನೀತಾ ಚಿಂಚೋಳಿ ಮುಂತಾದವರು ಉಪಸ್ಥಿತರಿದ್ದರು.