ಡಿ. 1 ರಿಂದ ಉಚಿತ ಸಹಜ ಹೆರಿಗೆ ಸೇವೆ

ಬೆಂಗಳೂರು, ನ.೨೦-ನಗರದ ಗವಿಪುರಂ ಗುಟ್ಟಹಳ್ಳಿ ಹೆರಿಗೆ ಆಸ್ಪತ್ರೆಯಲ್ಲಿ ಡಿ.೧ರಿಂದ ದಿನದ ೨೪ ಗಂಟೆಯೂ ಸಹಜ ಹೆರಿಗೆ ಹಾಗೂ ಸಿಸೆರಿಯನ್ ಶಸ್ತ್ರಚಿಕಿತ್ಸೆ ಸೇವೆ ಉಚಿತವಾಗಿ ನೀಡಲಾಗುವುದು ಎಂದು ಬಿಬಿಎಂಪಿ ಪ್ರಕಟಿಸಿದೆ.
ನಗರದಲ್ಲಿಂದು ಬಿಬಿಎಂಪಿಯ ಗವಿಪುರಂ ಗುಟ್ಟಹಳ್ಳಿ ಹೆರಿಗೆ ಆಸ್ಪತ್ರೆಯ ಪುನರಾರಂಭಕ್ಕೆ ಶಾಸಕ ಉದಯ್ ಬಿ. ಗರುಡಾಚಾರ್ ಹಾಗೂ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯರಾಮ್ ರಾಯಪುರ ಚಾಲನೆ ನೀಡಿದರು.
ಹ್ಯೂಮನ್ ಹೆಲ್ತ್ ಕೇರ್ ಪ್ರೈ.ಲಿ
ವತಿಯಿಂದ ಡಿಸೆಂಬರ್ ೧ರಿಂದ ಹೆರಿಗೆ ಆಸ್ಪತ್ರೆಯಲ್ಲಿ ದಿನದ ೨೪ ಗಂಟೆಯೂ ಸಹಜ ಹೆರಿಗೆ ಹಾಗೂ ಸಿಸೆರಿಯನ್ ಶಸ್ತ್ರಚಿಕಿತ್ಸೆ ಸೇವೆಗಳನ್ನು ಹೆಸರಾಂತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ವೈದ್ಯರಿಂದ ಉಚಿತ ಸೇವೆಗಳನ್ನು ನೀಡಲು ಪಿಪಿಪಿ ಅಡಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಇನ್ನೂ, ಪುನಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಉದಯ್ ಬಿ. ಗರುಡಾಚಾರ್, ಪಾಲಿಕೆಯ ಗವಿಪುರಂ ಗುಟ್ಟಹಳ್ಳಿ ಹೆರಿಗೆ ಆಸ್ಪತ್ರೆಯು ೧೯೬೩ರಲ್ಲಿ ಸ್ಥಾಪನೆಯಾಗಿದ್ದು, ೨೦೨೦ ರವರೆಗೂ ಸಹಜ ಹೆರಿಗೆ ಆರೋಗ್ಯ ಸೇವೆಗಳನ್ನು ನೀಡಲಾಗುತ್ತಿತ್ತು. ಕೋವಿಡ್ ಬಂದ ನಂತರ ಸದರಿ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ೧೦ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿತ್ತು. ಅದಾದ ಬಳಿಕ ಬಿಬಿಎಂಪಿಯ ಅನುದಾನದಲ್ಲಿ ಅಸ್ಪತ್ರೆಯನ್ನು ಪುನರ್ ನವೀಕರಣ ಮಾಡಲಾಗಿದೆ ಎಂದರು.
ಗವಿಪುರಂ ಗುಟ್ಟಹಳ್ಳಿ ಹೆರಿಗೆ ಆಸ್ಪತ್ರೆಯಲ್ಲಿ ದಿನದ ೨೪/೭ ಹೆರಿಗೆ ಸೌಲಭ್ಯಗಳಿಗಾಗಿ ಆಹ್ವಾನ್ ಫೌಂಡೇಶನ್ ವತಿಯಿಂದ ಅಂದಾಜು ೪೦ ಲಕ್ಷ ಮೊತ್ತದಲ್ಲಿ ಒಟಿ ಯಂತ್ರೋಪಕರಣಗಳು, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ, ಆಸ್ಪತ್ರೆಯ ಪೀಠೋಪಕರಣಗಳು ಸೇರಿಂದತೆ ಇತ್ಯಾದಿಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ವಿವರಿಸಿದರು.
ಗವಿಪುರಂ ಗುಟ್ಟಹಳ್ಳಿ ಹೆರಿಗೆ ಆಸ್ಪತ್ರೆಯ ಸುತ್ತಮುತ್ತಲೂ ಸಾಕಷ್ಟು ಕೊಳಚೆ ಪ್ರದೇಶಗಳು ಬರಲಿದ್ದು, ಕೊಳಚೆ ಪ್ರದೇಶದ ನಿವಾಸಿಗಳ ತಾಯಿಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಇನ್ನುಮುಂದೆ ದಿನದ ೨೪ ಗಂಟೆಯೂ ಹೆಚ್ಚಿನ ಆರೋಗ್ಯ ಸೇವೆಗಳನ್ನು ನೀಡಲಾಗುತ್ತದೆ.
ಗವಿಪುರಂ ಗುಟ್ಟಹಳ್ಳಿ ಸುತ್ತಮುತ್ತಲಿನ ಪ್ರದೇಶದ ನಾಗರಿಕರು ಆಸ್ಪತ್ರೆಯಲ್ಲಿ ಎಲ್ಲಾ ಉತ್ತಮ ಗುಣಮಟ್ಟದ ಸೇವೆಗಳನ್ನು ಉಚಿತವಾಗಿ ಪಡೆದು ತಾಯಿ ಮಕ್ಕಳೆಲ್ಲರೂ ಆರೋಗ್ಯವಾಗಿರಲು ಈ ಸದಾವಕಾಶ ಉಪಯೋಗಿಸಿಕೊಳ್ಳಲು ಅವರು ಕೋರಿದರು.
ಈ ವೇಳೆ ಆಹ್ವಾನ ಫೌಂಡೇಶನ್ ನ ಅಧ್ಯಕ್ಷ ಬ್ರಜ್ ಕಿಶೋರ್, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ತಂಡ, ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.