ಡಿ. 07 ಒಳಗೆ ಹಿಂಗಾರು ಬಿತ್ತನೆಗೆ ದರ್ಶನಾಪುರ ಮನವಿ

ಶಹಾಪುರ:ನ.24:ಕಳೆದ ಸಾಲಿಗಿಂತ ಈ ವರ್ಷ ನೀರಿನ ಕೊರತೆಯಿದ್ದು ಜೋಳ, ಗೋದಿ, ಸೂರ್ಯಕಾಂತಿ, ಕಡಲೆ, ಸೇಂಗಾ, ಸಜ್ಜೆ, ಕುಸುಬಿ, ತರಕಾರಿ ಸೇರಿದಂತೆ ಇತ್ಯಾದಿ ಹಿಂಗಾರು ಬೆಳೆಗಳನ್ನು ಡಿಸೆಂಬರ್ 07 ಒಳಗಾಗಿ ರೈತರು ಏಕ ಕಾಲಕ್ಕೆ ಬಿತ್ತನೆ ಕಾರ್ಯ ಕೈಗೊಳ್ಳಿ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ರೈತರಿಗೆ ಕರೆ ನೀಡಿದರು.

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ 102.744 ನೀರು ಲಭ್ಯವಿದ್ದು ಜೂನ್ 2022 ರವರೆಗೆ ಅಗತ್ಯ ಬಳಕೆಗಳಾದ ಕುಡಿಯುವ ನೀರು, ಬಾಷ್ಟಿಕರಣ, ಹಿನ್ನಿರಿನ ಬಳಕೆ, ಕೈಗಾರಿಕೆ ಇತ್ಯಾದಿಗಳಿಗಾಗಿ 39 ಟಿ.ಎಂ.ಸಿ ಮತ್ತು ನೀರಾವರಿಗಾಗಿ 63.70 ಟಿ.ಎಂ.ಸಿ ಲಭ್ಯವಿದ್ದು ಕಳೆದ ಸಾಲಿಗಿಂತ ಈ ವರ್ಷ 12.20 ಟಿ.ಎಂ.ಸಿ ನೀರಿನ ಕೊರತೆ ಕಾಡುತ್ತಿದೆ. 2021-22ನೇ ಸಾಲಿನ ಹಿಂಗಾರು ಹಂಗಾಮಿಗೆ ಡಿಸೆಂಬರ್ 08 ರಿಂದ ಮಾರ್ಚ 17ರ ವರೆಗೆ 14 ದಿನ ಚಾಲು ಹಾಗೂ 10 ದಿ ಬಂದ್ ಪದ್ದತಿ ಅನುಸರಿಸಿ 5 ಪಾಳೆಯಲ್ಲಿ 60 ದಿನಗಳಿಗೆ ನೀರು ಪೂರೈಸಲಾಗುದು. ಹಾಗೂ 4 ಪಾಳೆಯಲ್ಲಿ 40 ದಿನ ಬಂದ್ ಅನುಸರಿಸಿ ಒಟ್ಟಾರೆ 100 ದಿನಗಳಿಗೆ ನೀರು ಪೂರೈಸಲಾಗುದು ಎಂದರು.

ಈ ವರ್ಷ ನೀರಿನ ಕೊರತೆಯಿದ್ದ ಕಾರಣ ಭತ್ತ, ಕಬ್ಬು, ಬಾಳೆ ಬೆಳೆಗಳನ್ನು ಬೆಳೆಯದಿರಲು ರೈತರಿಗೆ ದರ್ಶನಾಪುರ ಮನವಿ ಮಾಡಿದರು.