ಡಿ.೬: ಅತಿಥಿ ಉಪನ್ಯಾಸಕರ ಸೇವಾ ಖಾಯಂಗೆ ಆಗ್ರಹಿಸಿ ಬೆಳಗಾವಿ ಚಲೋ

ರಾಯಚೂರು,ಡಿ.೪- ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಗಳ ಅತಿಥಿ ಉಪನ್ಯಾಸಕರ ಸೇವಾ ಖಾಯಮಾತಿಗೆ ಒತ್ತಾಯಿಸಿ ಡಿಸೆಂಬರ್ ೬ ರಂದು ತರಗತಿ ಬಹಿಷ್ಕರಿಸಿ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಶ್ರೀನಿವಾಸ ಹೊಸಪೇಟೆ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯ ಅತಿಥಿ ಉಪನ್ಯಾಸಕರ ಸೇವಾ ಖಾಯಮಾತಿಗಾಗಿ ಮತ್ತು ಅತಿಥಿ ಉಪನ್ಯಾಸಕರ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ಸಮಿತಿಯ ನಿರ್ಧಾರದಂತೆ ರಾಜ್ಯದ ಎಲ್ಲಾ ೪೩೦ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳು ತರಗತಿಗಳನ್ನು ಬಹಿಷ್ಕರಿಸಿ ರಾಜ್ಯದ ಆಯಾ ಜಿಲ್ಲಾ ಕೇಂದ್ರದಲ್ಲಿ ನವೆಂಬರ್ ೧೧ ರಿಂದ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಿದ್ದೇವೆ.
ದಶಕಗಳಿಂದ ಎಲ್ಲಾ ಸರಕಾರಗಳು ಹೋರಾಟ ಮಾಡಿದಾಗಲೆಲ್ಲಾ ಕೇವಲ ಭರವಸೆಗಳನ್ನು ನೀಡುತ್ತಾ ಬಂದಿವೆ. ಇಡೀ ನಮ್ಮ ಜೀವನವನ್ನು ನಮ್ಮನ್ನಾಳಿದ ಸರಕಾರಗಳ ಸುಳ್ಳು ಭರವಸೆಗಳಿಂದ ನಮ್ಮ ಕಣ್ಣೀರು ಒರೆಸಿಕೊಂಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ನಿರತರಾಗಿದ್ದೇವೆ. ಆದರೆ ಈಗ ನಮ್ಮ ಜೀವನ ದುಸ್ತರವಾಗಿದ್ದು, ಇನ್ನೊಂದು ಹುದ್ದೆಗೂ ಹೋಗಲು ನಮಗೆ ಆಗುತ್ತಿಲ್ಲ. ಮನೆಯಲ್ಲಿ ವೃದ್ಧ ತಂದೆ-ತಾಯಿ, ವಯಸ್ಸಿಗೆ ಬಂದ ಮಕ್ಕಳು, ಆಧುನಿಕ ರೋಗಗಳಿಗೆ ತುತ್ತಾದ ನಮ್ಮ ಜೀವನ ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಬೆಳಗಾವಿಯಲ್ಲಿಯೂ ನಮ್ಮ ಬೇಡಿಕೆಗೆ ಸರಕಾರ ಸ್ಪಂದಿಸದಿದ್ದರೆ ರಾಜ್ಯ ಸಮಿತಿಯ ನಿರ್ಧಾರದ ಮೇರೆಗೆ ಮುಂದಿನ ದಿನದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಡಾ.ಹನುಮಂತು, ಈರಣ್ಣ ಗಟ್ಟುಬಿಚ್ಚಾಲಿ, ಹನುಮಂತ ಚೌಹಾಣ್, ರವಿಕುಮಾರ ಬಣಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.