ಡಿ.೫ ಕರ್ನಾಟಕ ಬಂದ್‌ಗೆ ಕರೆ

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಸರ್ಕಾರದ ಕ್ರಮ ಖಂಡಿಸಿ, ರಾಜ್ಯದಲ್ಲಿ ಬಂದ್ ಆಚರಿಸುವ ಕುರಿತಂತೆ, ಇಂದು ನಗರದ ವುಡ್ ಲ್ಯಾಂಡ್ ಹೊಟೇಲ್‌ನಲ್ಲಿ ಕನ್ನಡಪರ ಸಂಘಟನೆಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಾಟಾಳ್ ನಾಗರಾಜ್, ಸಾರಾ ಗೋವಿಂದ್, ಮುಖ್ಯಮಂತ್ರಿ ಚಂದ್ರು, ಕೆ.ಆರ್. ಕುಮರ್, ಮತ್ತಿತರರು ಭಾಗವಹಿಸಿದ್ದರು.

ಬೆಂಗಳೂರು, ನ.೨೦-ರಾಜ್ಯ ಸರ್ಕಾರ ನೂತನ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿ.೫ ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ನಗರದಲ್ಲಿಂದು ಖಾಸಗಿ ಹೋಟೆಲ್‌ನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಹತ್ತಾರು ಸಂಘಟನೆಗಳ ಮುಖಂಡರು ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿವೆ.
ಡಿ.೫ ರಂದು ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ತೀರ್ಮಾನಿಸಿದ್ದು, ಪ್ರಮುಖವಾಗಿ ರಾಜಧಾನಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಪ್ರಧಾನ ನಗರಗಳಲ್ಲಿ ಪ್ರತಿಭಟನೆಯ ಕಾವು ಹೆಚ್ಚಲಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಸ್ಕಿ ಉಪ ಚುನಾವಣೆ ಹಿನ್ನಲೆಯಲ್ಲಿ ಇಂತಹ ವಿವಾದಿತ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕೈಹಾಕಿದ್ದಾರೆ ಎಂದು ದೂರಿರುವ ಪ್ರತಿಭಟನಾಕಾರರು, ಕರ್ನಾಟಕ ಬಂದ್‌ಗೂ ಮುನ್ನ ಸರಣಿ ಹೋರಾಟಗಳನ್ನು ಹಮ್ಮಿಕೊಂಡಿದ್ದು, ಡಿ. ೧ಕ್ಕೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆಗೆ ಕರೆ ನೀಡಿದ್ದಾರೆ.
ಅಷ್ಟೇ ಅಲ್ಲದೆ, ನವೆಂಬರ್ ೩೦ರ ಒಳಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಆದೇಶವನ್ನು ಹಿಂಪಡೆಯದೇ ಇದ್ದರೇ, ಡಿಸೆಂಬರ್ ೧ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಬಂದ್‌ಗೆ ಖಾಸಗಿ ವಾಹನಗಳ ಸಂಘಟನೆಗಳು ಬೆಂಬಲ ಸೂಚಿಸಿವೆ.
ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು. ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು. ಕರವೇ ಅಧ್ಯಕ್ಷ ಶಿವರಾಮೇಗೌಡ. ಮಂಜುನಾಥ್ ದೇವ. ಗಿರೀಶ್ ಗೌಡ. ಪಾಲನೇತ್ರ. ಟಿ.ಪಿ ಪ್ರಸನ್ನಕುಮಾರ್, ಅಮ್ಮಿಚಂದ್ರು. ನಾರಾಯಣ ಸ್ವಾಮಿ ಸೇರಿದಂತೆ ಪ್ರಮುಖರಿದ್ದರು.