ಡಿ.೪: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು,ಡಿ.೪ – ರೈತರ ಬೆಳೆಗಳನ್ನು ಸಂಕಷ್ಟಕ್ಕೆ ದೂಡುತ್ತಿರುವುದನ್ನು ಖಂಡಿಸಿ ಡಿಸೆಂಬರ್ ೬ ರಂದು ನಗರದ ಎಪಿಎಂಸಿ ಗಂಜ್ ವೃತ್ತದಿಂದ ಎಪಿಎಂಸಿಯವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಲಕ್ಷ್ಮಣಗೌಡ ಕಡಗಂದೊಡ್ಡಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ರೈತರಿಂದ ಮೊದಲು ಒಂದು ದರಕ್ಕೆ ಹತ್ತಿಯನ್ನು ಖರೀದಿಸಿ ನಂತರ ಮಿಲ್ ಗೆ ಹೋಗಿ ಅರ್ಧ ಅನ್ ಲೋಡ್ ಮಾಡಿದ ನಂತರ ಕ್ವಿಂಟಾಲ್ ಗೆ ೨೦೦ ರಿಂದ ೩೦೦ ರೂ. ಕಡಿಮೆ ದರ ನಿಗದಿ ಮಾಡುತ್ತಾರೆ. ಆಗ ರೈತರು ಇದನ್ನು ಪ್ರಶ್ನಿಸಿದರೆ, ನಿಮ್ಮ ಹತ್ತಿ ವಾಪಸ್ಸು ತೆಗೆದುಕೊಂಡು ಹೋಗಿ ಎನ್ನುತ್ತಾರೆ. ಅಲ್ಲಿಗೆ ಅನ್ ಲೋಡ್ ಚಾರ್ಜ್ ಮತ್ತು ಲೋಡ್ ಚಾರ್ಜ್ ಮತ್ತು ಸಾರಿಗೆ ಬಾಡಿಗೆ ಹೀಗೆ ಅನಾವಶ್ಯಕವಾಗಿ ಭರಿಸುವಂತೆ ಮಾಡುವ ಕುತಂತ್ರಗಳನ್ನು ಕೆಲವು ಹತ್ತಿ ಖರೀದಿದಾರರು ಅನುಸರಿಸುತ್ತಿರುವುದರಿಂದ ಹತ್ತಿ ಬೆಳೆದ ರೈತರು ತಮ್ಮದಲ್ಲದೆ ತಪ್ಪಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ವಿಂಟಾಲ್ ಹತ್ತಿಗೆ ೨ ಕೆ.ಜಿ. ಸೂಟ್ ಮುರಿಯುತ್ತಾರೆ. ತೂಕ ಮಾಡಿಸುವುದು ಭಾರವನ್ನು ರೈತರ ತಲೆ ಮೇಲೆ ಹಾಕುತ್ತಿದ್ದಾರೆ. ಖಾಸಗಿ ತೂಕದ ಯಂತ್ರದ ಮೇಲೂ ನಂಬಿಕೆ ಮೂಡುತ್ತಿಲ್ಲ. ಹೀಗೆ ಎಲ್ಲ ಕಡೆಯಿಂದ ಹತ್ತಿಬೆಳೆದ ರೈತನಿಗೆ ಮೋಸವಾಗುತ್ತಿದ್ದು ಇದನ್ನು ತಡೆಗಟ್ಟಲು ಮುಂದಾಗಬೇಕಿದೆ ಎಂದರು.
ತೊಗರಿ, ಸೂರ್ಯಕಾಂತಿ ಕಾಳುಗಳನ್ನು ೧ಕೆಜಿ ೧ವರೆ ಕೆಜಿ ಸ್ಯಾಂಪಲ್ ಎಂದು ತೆಗೆದುಕೊಂಡು ಹೋಗಲಾಗುತ್ತಿದೆ. ಇದು ನಿಲ್ಲಬೇಕು. ತೂಕದ ವೇಳೆಗೆ ಇರಬೇಕಾದ ಅಧಿಕಾರಿಯು ಇರದಿರುವುದರಿಂದ ಆ ಹುದ್ದೆಯ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದ ಅವರು, ದನದ ಸಂತೆಯ ಜಾಗೆಯನ್ನು ಶುಚಿಗೊಳಿಸಿ ವಾರದ ಸಂಜೆಯನ್ನು ಸುವ್ಯವಸ್ಥಿತವಾಗಿ ನಡೆಯುವಂತೆ ಮಾಡಬೇಕಲ್ಲದೆ ಅಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಇನ್ನು ತರಕಾರಿ ಕಾಯಿಪಲ್ಲೆ ತರುವ ಮಾರುವ ರೈತ ಮಹಿಳೆಯರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ಇದರ ಜೊತೆ ಹಲವು ರೈತ ಪರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿ.೬ ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಮೇಶ ಗಾಣದಾಳ, ನರಸಪ್ಪ ಹೊಕ್ರಾಣಿ, ಮಸೀದ್ ಸಾಬ್, ಪ್ರಾಣೇಶ ಗಾಣದಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.