ಡಿ. ೨೫: ವೈಕುಂಠ ಏಕಾದಶಿ

ಹುಳಿಯಾರು, ಡಿ. ೨೩- ಪಟ್ಟಣಕ್ಕೆ ಸಮೀಪವಿರುವ ಕೋಡಿಪಾಳ್ಯದ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಧ್ಯಾನ ನಗರಿಯಲ್ಲಿರುವ ಶ್ರೀ ಅನಂತ ಪದ್ಮನಾಭ ಸನ್ನಿಧಿಯಲ್ಲಿ ೪ನೇ ವರ್ಷದ ವೈಕುಂಠ ಏಕಾದಶಿಯನ್ನು ಡಿ. ೨೫ ರಂದು ಆಚರಿಸುವ ಕುರಿತಂತೆ ಪೂರ್ವಭಾವಿ ಸಭೆ ನಡೆಯಿತು.
ಸಾಂಸ್ಕೃತಿಕ ಸದನದ ಕಾರ್ಯದರ್ಶಿಯಾಗಿರುವ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ವೈಕುಂಠ ಏಕಾದಶಿಯನ್ನು ಕಳೆದ ಮೂರು ವರ್ಷಗಳಿಂದಲೂ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ.
ಸಂಜೆ ಎಂದಿನಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಬೆಂಗಳೂರಿನ ಹೆಸರಾಂತ ಸವಿತಕ್ಕನ ಹಳ್ಳಿ ಬ್ಯಾಂಡ್ ಕಲಾವಿದರ ತಂಡದಿಂದ ಜಾನಪದ ವೈಭವ ಹಾಗೂ ಹೊಸದುರ್ಗದ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದರು.
ಮಾತಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗಂಗಾಧರ್ ಮಾತನಾಡಿ, ಮುಂಜಾನೆ ಅನಂತಪದ್ಮನಾಭನ ಸನ್ನಿಧಿಯಲ್ಲಿ ತಿರುಪತಿಯ ವೆಂಕಟರಮಣನಿಗೆ ಹೋಮ ಹವನಾದಿಗಳು ನಡೆಯಲಿದ್ದು, ಸಂಜೆ ಸಾರ್ವಜನಿಕರಿಗೆ ಸಪ್ತದ್ವಾರದ ಮೂಲಕ ಅನಂತಪದ್ಮನಾಭನ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಭಕ್ತಾದಿಗಳಿಗೆ ಪ್ರಸಾದವಾಗಿ ತಿರುಪತಿ ಲಾಡು ಹಾಗೂ ಪುಳಿಯೋಗರೆ ವಿತರಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಲ್.ಆರ್.ಚಂದ್ರಶೇಖರ್, ಆಂಜನೇಯ ದೇವಸ್ಥಾನ ಸಮಿತಿ ಅಧ್ಯಕ್ಷ ಬಡಗಿ ರಾಮಣ್ಣ, ಸಮಿತಿಯ ಉಪಾಧ್ಯಕ್ಷ ಬ್ಯಾಂಕ್ ಮರುಳಯ್ಯ, ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ಕನ್ನಿಕಾಪರಮೇಶ್ವರಿ ಸೊಸೈಟಿ ಅಧ್ಯಕ್ಷ ಸುಧೀರ್, ಮಾತಾ ಚಾರಿಟಬಲ್ ಟ್ರಸ್ಟ್ ಸದಸ್ಯ ಚಂದ್ರಶೇಖರ್, ಎಸ್.ಒ. ಉಮೇಶ್‌ನಾಯಕ್, ಚಲನಚಿತ್ರ ನಿರ್ಮಾಪಕ ನಂದಿಹಳ್ಳಿ ಶಿವಣ್ಣ, ಕಲಾವಿದ ಗೌಡಿ, ಚಿರುಮುರಿ ಶ್ರೀನಿವಾಸ್, ಚಂದ್ರು, ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಭವಾನಿ ರಮೇಶ್, ಲಕ್ಷ್ಮಿಕಾಂತ್, ತಾಂಡವಾಚಾರ್, ಹಾರ್ಡ್‌ವೇರ್ ಬಸವರಾಜು, ಕರ್ನಾಟಕ ರಕ್ಷಣಾ ವೇದಿಕೆಯ ಬಾಳೆಕಾಯಿ ಲಕ್ಷ್ಮಿಕಾಂತ್, ಮೆಡಿಕಲ್ ಚನ್ನಬಸವಯ್ಯ ಮತ್ತಿತರರು ಉಪಸ್ಥಿತರಿದ್ದರು.