ಡಿ.೨೩-೨೪ ರಂದು ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಮಹಾ ಅಧಿವೇಶನ

ಸಂಜೆವಾಣಿ ವಾರ್ತೆ

ದಾವಣಗೆರೆ .ಅ.೭: ಬರುವ ಡಿಸೆಂಬರ್ ನ ೨೩,೨೪ ರಂದು ದಾವಣಗೆರೆ ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿಅಖಿಲ ಭಾರತ ವೀರಶೈವ ಮಹಾಸಭೆಯ ೨೪ ನೇ ಮಹಾ ಅಧಿವೇಶನ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಸಚಿವ ಈಶ್ವರ ಖಂಡ್ರೆ ತಿಳಿಸಿದರು.ನಗರದ ಬಾಪೂಜಿ ಎಂಬಿಎ ಸಭಾಂಗಣದಲ್ಲಿ ನಡೆದ ಮಹಾಸಭೆಯ  ಪೂರ್ವಭಾವಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ವೀರಶೈವ ಮಹಾಸಭೆಯ ೨೪ ನೇ ಮಹಾ ಅಧಿವೇಶನ ಕಳೆದ ವರ್ಷ ನಡೆಯಬೇಕಾಗಿತ್ತು.  ಕೋವಿಡ್ ಮತ್ತು ಸಾರ್ವತ್ರಿಕ ಚುನಾವಣೆ ಬಂದ ಕಾರಣದಿಂದ ನಡೆಯಲಿಲ್ಲ. ಈ ಬಾರಿ ಮಹಾಅಧಿವೇಶನ ಡಿಸೆಂಬರ್ ೨೩,೨೪ ರಂದು ದಾವಣಗೆರೆ ನಡೆಸಲು ತಿರ್ಮಾನಿಸಲಾಗಿದೆ. ಮಹಾ ಅಧಿವೇಶನ ಪ್ರತಿ ಐದು ವರ್ಷಕ್ಕೆ ಒಂದು ಬಾರಿ ನಡೆಯಲಿದೆ.ಅಧಿವೇಶನದ ಉದ್ದೇಶ ಪ್ರಪಂಚದಲ್ಲಿರುವ ಎಲ್ಲಾ ವೀರಶೈವ ಲಿಂಗಾಯತ ಜನರನ್ನು ಒಂದುಗೂಡಿಸಿ, ಸುತ್ತೂರು, ಸಿದ್ದಗಂಗಾ ಶ್ರೀ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಶ್ರೀಗಳಗೂ ಆಹ್ವಾನ ನೀಡಲಾಗುವುದು. ಗಣ್ಯರನ್ನು ಆಹ್ವಾನ ಮಾಡುತ್ತೇವೆ. ಪ್ರತಿ ಬಾರಿ ೩ ದಿವಸ ಮಹಾ ಅಧಿವೇಶನ ನಡೆಯುತ್ತಿತ್ತು. ಅದರೆ, ಈ ಬಾರಿ ಬರ ಇರುವ ಕಾರಣ ಎರಡು ದಿನ ಮಾತ್ರ ನಡೆಯಲಿದೆ. ಈ ಅಧಿವೇಶನದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.  ವಿವಿಧ ಮಠಾಧೀಶರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಸನ್ಮಾನ ಮಾಡಲಾಗುವುದು. ವೇದಿಕೆ, ಹಣಕಾಸು, ದಾಸೋಹ, ಮೆರವಣಿಗೆ, ಸಾರಿಗೆ ಸೇರಿದಂತೆ ವಿವಿಧ ಸಮಿತಿಗಳ ರಚನೆ ಮಾಡಿ ಅಧಿಕಾರ ಕೊಡಲಾಗಿದೆ. ಮಹಿಳಾ ಘಟಕವೂ ಕಾರ್ಯ ನಿರ್ವಹಿಸಲಿದೆ. ಈ ಬಾರಿ ಯುವ, ಮಹಿಳಾ, ಯುವ, ರೈತ ಅಧಿವೇಶನ ನಡೆಯಲಿದ್ದು, ವೀರಶೈವ ಲಿಂಗಾಯತ ಸಮುದಾಯವು ನಡೆದುಕೊಂಡ ಬಂದ ರೀತಿ, ಎದುರಿಸುತ್ತಿರುವ ಸಂಕಷ್ಟಗಳು, ಮುಂದೆ ಏನಾಗಬೇಕು, ಈ ಹಿಂದೆ ಏನಾಗಿದೆ ಎಂಬ ವಿಚಾರ ಸೇರಿದಂತೆ ಜ್ವಲಂತ ಸಮಸ್ಯೆಗಳ ಕುರಿತಂತೆ ಬೆಳಕು ಚೆಲ್ಲಲು ಯಾವ ರೀತಿಯಲ್ಲಿ ಗೋಷ್ಠಿಗಳನ್ನು ಆಯೋಜನೆ ಮಾಡಬೇಕು ಎಂಬ ಕುರಿತಂತೆಯೂ ಸಮಾಲೋಚನೆ ನಡೆಸಲಾಯಿತು ಎಂದು ಮಾಹಿತಿ ನೀಡಿದರು.ಅಧಿವೇಶನದಲ್ಲಿ ಕೆಲವು ನಿರ್ಣಯಗಳನ್ನು ಅಂಗೀಕಾರ ಮಾಡಿ, ಗೊತ್ತುವಳಿ ಮಂಡನೆ ಮಾಡುತ್ತೇವೆ. ಇದನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತೇವೆ. ಈ ಹಿಂದೆ ನಡೆದ ಮಹಾ ಅಧಿವೇಶನಗಳಲ್ಲಿ ತೆಗೆದುಕೊಂಡ ನಿರ್ಣಯಗಳ ಪೈಕಿ ಕೆಲವು ಅನುಷ್ಠಾನಕ್ಕೆ ಬಂದಿದ್ದರೆ, ಮತ್ತೆ ಕೆಲವು ಅನುಷ್ಠಾನಕ್ಕೆ ಬಂದಿಲ್ಲ. ಈ ಕುರಿತಂತೆಯೂ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.ಪಕ್ಷಾತೀತವಾಗಿ ಎಲ್ಲಾ ಪಕ್ಷಗಳಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ಜನಪ್ರತಿನಿಧಿಗಳನ್ನು ಆಹ್ವಾನಿಸುತ್ತೇವೆ. ಯಾರು ಉದ್ಘಾಟನೆ ನೆರವೇರಿಸಬೇಕು, ಮುಖ್ಯ ಅತಿಥಿಗಳಾಗಿ ಯಾರು ಬರಬೇಕು ಎಂಬ ಕುರಿತಂತೆ ಇನ್ನು ಹದಿನೈದು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗುವುದು. ವೀರಶೈವ ಲಿಂಗಾಯತ ಭವನ, ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಕೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳು ಇವೆ. ಇವುಗಳ ಕುರಿತಾಗಿಯೂ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.ಯಾವ ಜಾತಿಗೂ ತಾರತಮ್ಯ ಮಾಡಿಲ್ಲಮುಖ್ಯಮಂತ್ರಿ  ಸಿದ್ದರಾಮಯ್ಯರ ನೇತೃತ್ವದ ಸರ್ಕಾರ ಎಲ್ಲಾ ಜಾತಿ, ಭಾಷೆ, ಸಮಾಜದವರಿಗೆ ನ್ಯಾಯ ಒದಗಿಸಿದೆ. ಬಸವಣ್ಣನವರ ಪ್ರೇರಣೆ ಪಡೆದು ಆಡಳಿತ ನಡೆಸುತ್ತಿದೆ. ಯಾವ ಜಾತಿಗೂ ತಾರತಮ್ಯ, ಕಡೆಗಣನೆ ಆಗಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಕರೆಯಲಾಗಿದ್ದ ವೀರಶೈವ ಲಿಂಗಾಯತ ಮಹಾ ಅಧಿವೇಶನದ ಪೂರ್ವಭಾವಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಶಾಸಕ ಶಾಮನೂರು ಶಿವಶಂಕರಪ್ಪರು ಲಿಂಗಾಯತ ಸಮುದಾಯದ ಅಧಿಕಾರಿಗಳ ಕಡೆಗಣನೆ ವಿಚಾರ ಕುರಿತಂತೆಯೂ ಪ್ರಸ್ತಾಪ ಆಗಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಾತಿ ಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದಲ್ಲಿ ಚರ್ಚೆಯಾಗಿದೆ. ಜಾತಿ ಗಣತಿ ಬಿಡುಗಡೆ ವಿಚಾರ ಸಂಬಂಧ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ತಿಳಿಸಿದರು.ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ,  ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್. ತಿಪ್ಪಣ್ಣ, ಅಥಣಿ ವೀರಣ್ಣ, ಎಸ್. ಎಸ್. ಗಣೇಶ್, ಅಣಬೇರು ರಾಜಣ್ಣ, ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಶಂಕರ್ ಬಿದರಿ ಸೇರಿದಂತೆ ಬೇರೆ ರಾಜ್ಯದ ಪ್ರತಿನಿಧಿಗಳು, ಕೇಂದ್ರ ಸಮಿತಿ ಸದಸ್ಯರು, ಯುವ ಮುಖಂಡರು, ಮಹಿಳಾ ಘಟಕಗಳ ಅಧ್ಯಕ್ಷರು ಹಾಜರಿದ್ದರು.