ಡಿ.೧೧ ರಂದು ಶಿಕ್ಷಕರಿಗೆ ಕಾರ್ಯಾಗಾರ

ದಾವಣಗೆರೆ. ಡಿ.೯: ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟದಿಂದ ಜಿಲ್ಲೆಯ ಸುಮಾರು 350ಕ್ಕೂ ಹೆಚ್ಚು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮುಖ್ಯಸ್ಥರು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಆಡಳಿತಾಧಿಕಾರಿಗಳು, ಹಿರಿಯ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವನ್ನು ನಗರದಲ್ಲಿ 11ರಂದು ಆಯೋಜಿಸಲಾಗಿದೆ ಎಂದು ಒಕ್ಕೂಟದ ನಿರ್ದೇಶಕ ಹೆಚ್.ಜಯಣ್ಣ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 11ರ ಶನಿವಾರ ಬೆಳಿಗ್ಗೆ 10ರಿಂದ ಸಚಿಜೆ 4.30ರವರೆಗೆ ನಗರದ ರಾಷ್ಟ್ರೋತ್ಥಾನ ಶಾಲೆಯ ಸಭಾಂಗಣದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಆರ್.ತಿಪ್ಪೇಸ್ವಾಮಿ, ದಾವಣಗೆರೆ ವಿಶ್ವವಿದ್ಯಾಲಯದ ರಿಜಿಸ್ಟಾçರ್ ಗಾಯತ್ರಿ ದೇವರಾಜ್ ಕಾರ್ಯಾಗಾರ ಉದ್ಘಾಟಿಸುವರು. ಬೆಂಗಳೂರಿನ ಡಿಎಸ್‌ಆರ್‌ಟಿ ಕೌಶಲ್ಯ ತರಬೇತುದಾರರೂ, ರಾಜ್ಯ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರಾದ ಪಾರ್ವತಿಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಕಾರ್ಯಾಗಾರದಲ್ಲಿ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ದಾವಣಗೆರೆ ಜಿಲ್ಲೆಯ ಖಾಸಗಿ ಶಾಲೆಗಳ ಪಾತ್ರ ಮಹತ್ವದ್ದು, ಜಿಲ್ಲಾ ಹಂತದಲ್ಲಿ ಶೇ.50ರಷ್ಟು ಶಾಲೆಗಳು ಖಾಸಗಿ ಶಾಲೆಗಳಾಗಿವೆ. ಪ್ರಸ್ತುತ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಬರುತ್ತಿದ್ದು, ಆ ಪ್ರಯುಕ್ತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ2020 ಕುರಿತು ಜಿಲ್ಲೆಯ ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ, ಮುಖ್ಯಸ್ಥರಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಅಲ್ಲದೇ ಶಿಕ್ಷಣ ನೀತಿಯನ್ನು ಶಾಲೆಗಳಲ್ಲಿ ಹೇಗೆ ಅಳವಡಿಸಿಕೊಳ್ಳುವುದು. ಗುಣಾತ್ಮಕ ಶಿಕ್ಷಣ ರೂಪಿಸುವ ಕುರಿತು ಶಾಲೆಗಳ ಮುಖ್ಯಸ್ಥರಿಗೆ ತಿಳಿಸುವ ಸಲುವಾಗಿ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪೋಷಕರಲ್ಲಿ ಗೊಂದಲ ಉಂಟಾಗಿದೆ. ಅದನ್ನು ಶಿಕ್ಷಕರ ಮೂಲಕ ಸಮಾಜಕ್ಕೆ ತಿಳಿಸಿಕೊಡಲಾಗುವುದು. ಈ ಹಿಂದೆ ಕೌಶಲ್ಯ ಆಧಾರಿತ ಶಿಕ್ಷಣ ಇರಲಿಲ್ಲ. ಇದೀಗ ಅದನ್ನು ಜಾರಿಗೆ ತರಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಶಾಲೆಗಳು ಹೊಸ ಶಿಕ್ಷಣ ನೀತಿಯನ್ನು ಅಳವಡಿಕೊಳ್ಳಬೇಕಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಟಿ.ಎಂ.ಉಮಾಪತಯ್ಯ, ಪ್ರಧಾನ ಕಾರ್ಯದರ್ಶಿ ಸಿ.ರಾಮಮೂರ್ತಿ, ಕಾರ್ಯಾಧ್ಯಕ್ಷ ಕೆ.ಸಿ.ಲಿಂಗರಾಜ್, ಸಹ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಅಗಡಿ, ಎ.ಎನ್.ಪ್ರಸನ್ನಕುಮಾರ್,ಮೈನುದ್ದೀನ್ ಇತರರು ಇದ್ದರು.