ಡಿ.೧ರಂದು ರೈತ ಖಾತೆಗೆ ಪರಿಹಾರದ ಹಣ – ಸಚಿವ ಅಚಾರ್

ಸಿಂಧನೂರು.ನ.೨೩-ಅಕಾಲಿಕ ಮಳೆಗೆ ಭತ್ತ ಸೇರಿ ಇತರೆ ಬೆಳೆಗಳು ಹಾನಿಗೀಡಾಗಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರಾಯಚೂರು-ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಅಚಾರ್ ಬೆಳೆ ಹಾನಿಯಾದ ಜಮೀನುಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ಬೆಳೆ ಹಾನಿ ಸಮೀಕ್ಷೆ ನಡೆಸಿದರು.
ತಾಲೂಕಿನ ಮುಕ್ಕುಂದಾ, ಸಿಂಗಾಪುರ, ಹುಡಾ ಸೇರಿದಂತೆ ಇನ್ನೀತರ ಗ್ರಾಮಗಳಿಗೆ ಮಳೆಗೆ ಹಾನಿಗೀಡಾದ ಬೆಳೆ ಸಮೀಕ್ಷೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮಳೆಗೆ ಹಾನಿಯಾದ ಭತ್ತ, ತೊಗರಿ, ಜೋಳ, ಕಡಲೆ, ಮೆಣಸಿನಕಾಯಿ, ಮೆಕ್ಕೆ ಜೋಳ ಸೇರಿದಂತೆ ನೀರಾವರಿ ಹಾಗೂ ಒಣ ಬೇಸಾಯದ ಬೆಳೆಗಳನ್ನು ಸಹ ಸರ್ವೆ ಮಾಡಿ ಸರ್ಕಾರಕ್ಕೆ ಇದೆ ೩೦ರೊಳಗೆ ಸರ್ಕಾರ ವರದಿ ನೀಡುವಂತೆ ರಾಯಚೂರು-ಕೊಪ್ಪಳ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದರು.
ರಾಯಚೂರು-ಕೊಪ್ಪಳ ಎರಡು ಜಿಲ್ಲೆಗಳಲ್ಲಿ ಮಳೆಗೆ ಅಪಾರ ಪ್ರಮಾಣದ ನೀರಾವರಿ ಮತ್ತು ಒಣಬೇಸಾಯದ ಬೆಳೆಗಳು ಹಾನಿಗೀಡಾಗಿದ್ದು ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಜಂಟಿಯಾಗಿ ಯಾವ ರೈತರಿಗು ತೊಂದರೆಯಾಗದ ರೀತಿ ನ. ೩೦ರೊಳಗೆ ಸರ್ವೆ ನಡೆಸಿ ವರದಿ ಸಲ್ಲಿಸಿದರೆ ಡಿ ೧ನಂತರ ರೈತರ ಖಾತೆಗಳಿಗೆ ಬೆಳೆ ನಷ್ಟ ಪರಿಹಾರ ಹಣ ಜಮಾವಾಗಲಿದ್ದೆ. ಆದ್ದರಿಂದ ರೈತರು ಆತಂಕ ಪಡೆಬೇಕಾಗಿಲ್ಲ, ನಿಮ್ಮೊಂದಿಗೆ ಸರ್ಕಾರವಿದೆ ರೈತರಿಗೆ ಸಚಿವ ಮನೋಧೈರ್ಯ ತುಂಬಿದರು.
ಕೊಪ್ಪಳ ಸಂಸದ ಸಂಗಣ್ಣ ಕರಡಿ ನಾನು ಮುಖ್ಯಮಂತ್ರಿಗಳನ್ನು ಬೆಳೆ ಹಾನಿ ಬಗ್ಗೆ ಮಾಹಿತಿ ನೀಡಿ ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಕೋರಿದ್ದು ಕೃಷಿ ಸಚಿವರು ವಿಮಾ ಕಂಪನಿಗಳೊಂದಿಗೆ ಮಾತನಾಡಿ ಬೆಳೆ ವಿಮೆ ಹಣ ಬಿಡುಗಡೆಗೊಳಿಸುವಂತೆ ಚರ್ಚಿಸಲಾಗಿದೆ ಎಂದರು.
ಶಾಸಕರಾದ ವೆಂಕಟರಾವ್ ನಾಡಗೌಡ, ಬಸವರಾಜ ದಡೇಸುಗೂರು, ಮುಖಂಡರಾದ ಕೊಲ್ಲಾ ಶೇಷಗಿರಿ ರಾವ್, ಶಿವನಗೌಡ ಗೋರೆಬಾಳ, ಅಮರೇಗೌಡ ವೀರೂಪಾಪುರ, ಹನುಮೇಶ ಸಾಲಗುಂದಾ, ಪರಮೇಶ ಆದಿಮನಿ, ಧರ್ಮನಗೌಡ, ಎಂ. ದೊಡ್ಡಬಸವರಾಜ ಸೇರಿದಂತೆ ಜಿಲ್ಲಾಧಿಕಾರಿ ಡಾ|| ಅವಿನಾಶ, ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್, ಡಿವಾಯ್‌ಎಸ್‌ಪಿ ವೆಂಕಟಪ್ಪ ನಾಯಕ, ಉಮೇಶ ಕಾಂಬಳೆ, ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮೇಗೌಡ, ತಹ್‌ಶೀಲ್ದಾರ ಮಂಜುನಾಥ ಬೋಗಾವತಿ, ಪಿಡಬ್ಲ್ಯೂಡಿ ಎಇಇ ಚಂದ್ರಶೇಖರ ಪಾಟೀಲ್ ಸೇರಿದಂತೆ ಎರಡು ಜಿಲ್ಲೆಗಳ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.