ಡಿ.ಸಿ. ಎಸ್.ಪಿ ಅವರಿಂದ ವಿಶಿಷ್ಟ ಕಾರ್ಯಾಚರಣೆ: ಮಾಸ್ಕ್ ಹಾಕದವರಿಗೆ ಬಿತ್ತು ದಂಡ

ಬೀದರ:ನ.10: ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾರ ನಾಗೇಶ ಡಿ.ಎಲ್. ಅವರು ನವೆಂಬರ್ 9ರಂದು ನಗರದಲ್ಲಿ ಮಾಸ್ಕ ಧರಿಸದೇ ಇರುವವರಿಗೆ ತಿಳಿವಳಿಕೆ ಮೂಡಿಸುವ ಮತ್ತು ದಂಡ ವಿದಿಸುವ ಕಾರ್ಯಾಚರಣೆ ಕೈಗೊಂಡರು.
ನಗರಸಭೆ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸ್ ಅಧಿಕಾರಿಗಳೊಂದಿಗೆ ದಿಢೀರ್ ಅಲ್ಲಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮಾಸ್ಕ ಇಲ್ಲದವರಿಗೆ ಮಾಸ್ಕ ನೀಡಿ, ಮಾಸ್ಕ ಧರಿಸದೇ ಸುತ್ತುತ್ತಿರುವವರಿಗೆ ದಂಡವಿಧಿಸಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಮಾಸ್ಕ ಧರಿಸದೆ ಅಲ್ಲಲ್ಲಿ ನಿಂತಿದ್ದವರನ್ನು ಜಿಲ್ಲಾಧಿಕಾರಿಗಳು ತಮ್ಮ ಬಳಿ ಕರೆದರು. ಮಾಸ್ಕ ಯಾಕೆ ಧರಿಸುತ್ತಿಲ್ಲ ? ಎಂದು ಪ್ರಶ್ನಿಸಿ, ಮಾಸ್ಕ ನೀಡಿ, ಧರಿಸಲು ತಿಳಿಸಿದರಲ್ಲದೇ ಇನ್ಮುಂದೆ ತಾವುಗಳು ಮರೆಯದೇ ಮಾಸ್ಕ ಧರಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಸೂಚಿಸಿದರು.
ಡಿಸಿ ಹಾಗೂ ಎಸ್ಪಿ ಅವರು ಅರ್ಧ ಗಂಟೆಗೂ ಹೆಚ್ಚು ಕಾಲ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಮುಂದಿನ ರಸ್ತೆಯಲ್ಲಿ ನಿಂತು ಕಾರ್ಯಾಚರಣೆಯಲ್ಲಿ ಭಾಗಿಯಾದರು. ಮಾಸ್ಕ ಧರಿಸದೇ ಬೈಕ್ ಹಾಗೂ ಆಟೋ ಏರಿ ಬರುತ್ತಿದ್ದವರನ್ನು ನೋಡುತ್ತಿದ್ದ ಡಿಸಿ ಹಾಗೂ ಎಸ್ಪಿ ಅವರು, ತಾವೇ ಕೈ ತೋರಿಸಿ ನಿಲ್ಲಿಸಿ ದಂಡ ಹಾಕÀಲು ಸೂಚನೆ ನೀಡಿದರು.
ಬೈಕ್, ಆಟೋ ತಡೆದರು: ಮಾಸ್ಕನ್ನು ಜೇಬಿನಲ್ಲಿರಿಸಿಕೊಂಡು ತಿರುಗುತ್ತಿದ್ದ ದ್ವಿಚಕ್ರ ಸವಾರರನ್ನು ಮತ್ತು ಆಟೋ ಚಾಲಕರನ್ನು ತಡೆದು, ಅವರಿಂದ ದಂಡ ವಸೂಲಿ ಮಾಡಿ ಕಳುಹಿಸಲಾಯಿತು.
ತಪ್ಪಾಯ್ತು, ಮಾಸ್ಕ ಧರಿಸುತ್ತೇವೆ: ಡಿಸಿ ಮತ್ತು ಎಸ್ಪಿ ಅವರಿಂದ ಕಾರ್ಯಾಚರಣೆ ನಡೆದಿದೆ ಎಂಬುದನ್ನು ದೂರದಿಂದಲೇ ಗಮನಿಸುತ್ತಿದ್ದ ಕೆಲವು ಬೈಕ್ ಸವಾರರು, ಆಟೋ ಚಾಲಕರು ದೂರದಲ್ಲೇ ಬೈಕ್, ಆಟೋ ನಿಲ್ಲಿಸಿ ಮಾಸ್ಕ ಧರಿಸಿ ತೆರಳುತ್ತಿರುವುದು ಕಂಡು ಬಂದಿತು.
ಡಿಸಿ ಎಸ್ಪಿ ಅವರಿಗೆ ವಚನ ನೀಡಿದರು: ಮಾಸ್ಕ ಇಲ್ಲದೇ ಅಡ್ಡಾಡುತ್ತಿರುವುದಕ್ಕೆ ಕ್ಷಮಿಸಿ ಸರ್. ನಮ್ಮ ಬಳಿ ಹಣವಿಲ್ಲ. ನಮಗೆ ದಂಡ ವಿದಿಸಬೇಡಿ, ನಾವು ಇನ್ಮುಂದೆ ತಪ್ಪದೇ ಮಾಸ್ಕ ಧರಿಸುತ್ತೇವೆ ಎಂದು ಕೆಲವರು ಡಿಸಿ ಮತ್ತು ಎಸ್ಪಿ ಅವರಿಗೆ ಮಾತು ಕೊಟ್ಟು, ಮಾಸ್ಕ ಧರಿಸಿ ಮುಂದೆ ಹೋಗುತ್ತಿರುವುದು ಸಾಮಾನ್ಯವಾಗಿತ್ತು.
ನ್ಯಾಯಾಲಯ, ತಹಸೀಲ್ ಕಚೇರಿ ಮುಂದೆ ಸಂಚಾರ: ಡಿಸಿ ಹಾಗೂ ಎಸ್ಪಿ ಅವರು ಜಿಲ್ಲಾ ನ್ಯಾಯಾಲಯ ಮತ್ತು ತಹಸೀಲ್ ಕಚೇರಿಯ ಮುಂದಿನ ರಸ್ತೆಯಲ್ಲಿ ಸಂಚರಿಸಿ ಕಾರ್ಯಾಚರಣೆ ನಡೆಸಿದರು. ರಸ್ತೆಯ ಬದಿಯಲ್ಲಿದ್ದ ಕೆಲವು ಅಂಗಡಿಗಳ ಮುಂದೆ ನಿಂತಿದ್ದ ಸಾರ್ವಜನಿಕರ ಬಳಿ ತೆರಳಿ ಮಾಸ್ಕ ಧರಿಸಲು ತಿಳಿಸಿದರು.
ಬಸ್ ಏರಿ ತಿಳಿ ಹೇಳಿದರು: ಗುಂಪಾ, ಮೈಲೂರ ಮತ್ತು ಮನ್ನಾಏಖೆಳ್ಳಿಯಿಂದ ಜನರನ್ನು ಹೊತ್ತುಕೊಂಡು ಬಂದ ಮೂರ್ನಾಲ್ಕು ಬಸ್‍ಗಳನ್ನು ನಿಲ್ಲಿಸಿ, ಬಸ್ ಏರಿದ ಡಿಸಿ ಮತ್ತು ಎಸ್ಪಿ ಅವರು ಮಾಸ್ಕ ಇಲ್ಲದವರಿಗೆ ಎಚ್ಚರಿಕೆ ನೀಡಿ, ಮಾಸ್ಕ ವಿತರಿಸಿ ಧರಿಸಲು ತಿಳಿಸಿದರು.
ಸಾರ್ವಜನಿಕರಲ್ಲಿ ಮನವಿ: ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಅತ್ಯಂತ ಮಹತ್ವವಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾರ್ವಜನಿಕರು ಒತ್ತು ನೀಡಬೇಕು. ಹೊರಗಡೆ ಹೋಗುವಾಗ ತಪ್ಪದೇ ಮಾಸ್ಕ ಧರಿಸಬೇಕು ಎಂದು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇದೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್.ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣದಲ್ಲಿದೆ. ಈ ವೈರಸ್ ತೊಲಗುವವರೆಗೆ ಜನರು ಜಾಗೃತಿಯಿಂದರಬೇಕಿದೆ. ಕೋವಿಡ್‍ನ್ನು ನಿರ್ಮೂಲನೆ ಮಾಡುವವರೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಮಾಸ್ಕನ್ನು ಧರಿಸಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಕಾರ್ಯಾಚರಣೆ ಇನ್ಮುಂದೆ ಪುನಾರಂಭ: ಕೋವಿಡ್-19 ಹಿನ್ನೆಲೆಯಲ್ಲಿ ನಗರಸಭೆಯಿಂದ ಕೆಲವು ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ಆರಂಭಿಸುತ್ತಿದ್ದು, ನಿಷೇಧಿತ ಪ್ಲಾಸ್ಟಿಕ್ ಬಳಕೆ ಕಂಡುಬಂದರೆ ಅಂತವರ ಮೇಲೆ ದಾಳಿ ನಡೆಸಿ ಕ್ರಮ ವಹಿಸಲಾಗುವುದು ಎಂದು ಇದೆ ವೇಳೆ ನಗರಸಭೆ ಪೌರಾಯುಕ್ತರಾದ ಅಂಗಡಿ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‍ನಿಂದ ನಡೆದ ಈ ಕಾರ್ಯಾಚರಣೆಯಲ್ಲಿ ನಗರಸಭೆಯ ಅಭಿಯಂತರರು ಮತ್ತು ಸಿಬ್ಬಂದಿ ಹಾಗೂ ಜಿಲ್ಲಾ ಸಂಚಾರಿ ಪೊಲೀಸ್‍ನ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.