
ಕೋಲಾರ,ಏ,೨೪:ನಿಮಗೆ ಏನಾದರೂ ಸ್ವಾಭಿಮಾನ ಇದ್ದರೆ ಮೊದಲು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಂತರ ಕಾಂಗ್ರೆಸ್ ಪಕ್ಷದ ವಿರುದ್ದ ಮಾತಾಡಲಿ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ವಿರುದ್ದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸವಾಲು ಹಾಕಿದರು.
ತಾಲೂಕಿನ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಹುತ್ತೂರು ಹೋಬಳಿಯ ಅಬ್ಬಣಿ ಗ್ರಾಮದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಹಾಗೂ ಹೋಬಳಿಯ ಮುಖಂಡರನ್ನು ಬಳಸಿಕೊಂಡು ಟಿಷೂ ಪೇಪರ್ ಬಿಸಾಕಿದ ರೀತಿಯಲ್ಲಿ ದೂರ ಹೋಗಿದ್ದಾರೆ ನೀನು ಹೋಗಿರುವ ಜೆಡಿಎಸ್ ಪಕ್ಷದ ಮಲ್ಲೇಶ್ ಬಾಬುರನ್ನು ನಿನ್ನ ಬುದ್ಧಿವಂತಿಕೆಯ ಮಾತುಗಳಿಂದ ನಂಬಿಸಬಹುದು ಆದರೆ ಹೋಬಳಿಯ ಜನಕ್ಕೆ ನಿನ್ನ ಮೋಸದ ಆಟವನ್ನು ನಂಬಿಸಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಿಂದ ನಿನ್ನ ಸ್ವಾರ್ಥಕ್ಕಾಗಿ ಎಲ್ಲರನ್ನೂ ಬಳಸಿಕೊಂಡಿದ್ದೀಯಾ ನಿನಗೆ ಏನಾದರೂ ಮನುಷ್ಯತ್ವ, ಮನಸಾಕ್ಷಿ, ಆತ್ಮಸಾಕ್ಷಿ ಅನ್ನೋದು ಏನಾದರೂ ಇದ್ದರೆ ನಿನಗೆ ಸಹಾಯ ಮಾಡಿದವರ ಬಗ್ಗೆ ಜ್ಞಾಪಕ ಮಾಡಿಕೋ ನಿನ್ನಿಂದ ನಾನು ೧೦೦ ರೂಪಾಯಿ ಮುಟ್ಟಿಲ್ಲ ನಿನ್ನ ಋಣದಲ್ಲಿ ನಾವು ಇಲ್ಲ ಇನ್ನೂ ನಮ್ಮ ಸಹಾಯದ ಋಣ ನಿನ್ನ ಮೇಲಿದೆ ಅನ್ನೊದು ಯಾವತ್ತೂ ಮರಿಯಬೇಡ ಹೋಬಳಿಯಲ್ಲಿ ದೇವರಾಜ್ ಅರಸ್ ಹಾಸ್ಟೆಲ್ ನಿರ್ಮಾಣಕ್ಕೆ ಹೊಳಲಿ ಗ್ರಾಮದ ಬಳಿ ೧೦ ಎಕರೆ ಜಾಗ ಮಂಜೂರು ಮಾಡಲಾಗಿತ್ತು ನಿನ್ನ ಅಧಿಕಾರದ ದರ್ಪದಿಂದ ಡೈರಿ ಹೆಸರಿಗೆ ವಶಪಡಿಸಿಕೊಂಡಿದ್ದು ಹೋಬಳಿಯ ಜನಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಮಾಡಿದ ದೊಡ್ಡ ಮೋಸ ಎಂದರು.
ಅಬ್ಬಣಿ ಗ್ರಾಮದ ಯುವಕರು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್ ನಾಗರಾಜ್, ಮಾಜಿ ತಾಪಂ ಕೃಷ್ಣೇಗೌಡ, ರಾಮಕೃಷ್ಣೇಗೌಡ, ಹುತ್ತೂರು ಗ್ರಾಪಂ ಮಾಜಿ ಅಧ್ಯಕ್ಷ ಕೋಟೆ ನಾರಾಯಣಸ್ವಾಮಿ, ಮುಖಂಡರಾದ ಸೋಮಪ್ಪ, ಅ.ನಾ ಹರೀಶ್ ಇದ್ದರು.