ಡಿ.ರಾಂಪೂರು : ಒಂದೆ ದಿನ ೯ ಪಂಪ್ ಸೆಟ್ ಕಳುವು

ರಾಯಚೂರು.ಆ.೦೪- ಒಂದೇ ದಿನ ರೈತರಿಗೆ ಸಂಬಂಧಿಸಿದ ೯ ಪಂಪ್ ಸೆಟ್‌ಗಳನ್ನು ಕಳುವು ಮಾಡಿದ ಪ್ರಕರಣ ರೈತರು ಭಾರೀ ಆರ್ಥಿಕ ನಷ್ಟಕ್ಕೆ ಗುರಿಯಾಗುವಂತೆ ಮಾಡಿದೆ.
ಡಿ.ರಾಂಪೂರು ಬಳಿ ಕೃಷ್ಣಾ ನದಿಗೆ ಹಾಕಲಾಗಿದ್ದ ಮೋಟಾರಗಳನ್ನು ರಾತ್ರೋರಾತ್ರಿ ಕದಿಯಲಾಗಿದೆ. ೧೨ ಹೆಚ್.ಪಿ. ಮತ್ತು ೧೦ ಹೆಚ್.ಪಿ. ಮೋಟಾರುಗಳನ್ನು ಕಳುವು ಮಾಡಿದ್ದರಿಂದ ರೈತರಿಗೆ ಸುಮಾರು ೬ ಲಕ್ಷ ಆರ್ಥಿಕ ನಷ್ಟ ಉಂಟಾಗಿದೆ. ಜೂನ್ ತಿಂಗಳಲ್ಲೂ ಇದೆ ರೀತಿಯಲ್ಲಿ ಪಂಪ್‌ಗಳನ್ನು ಕಳುವು ಮಾಡಲಾಗಿತ್ತು. ನದಿಗೆ ಏತ ನೀರಾವರಿ ಉದ್ದೇಶಕ್ಕೆ ಹಾಕಲಾದ ಪಂಪ್ ಸೆಟ್‌ಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ. ಸುಮಾರು ೪೦ ರಿಂದ ೫೦ ಸಾವಿರ ವೆಚ್ಚದಲ್ಲಿ ಖರೀದಿಸಿದ ಪಂಪ್ ಸೆಟ್‌ಗಳನ್ನು ಕಳುವು ಮಾಡುತ್ತಿರುವುದು ರೈತರ ಪಾಲಿಗೆ ಭಾರೀ ಕಳವಳಕ್ಕೆ ದಾರಿ ಮಾಡಿದೆ.
ಈ ಕುರಿತು ಯಾಪಲದಿನ್ನಿ ಠಾಣೆಗೆ ದೂರು ನೀಡಲಾಗಿದೆ. ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಅವರು ಮೇಲಾಧಿಕಾರಿಗಳಿಗೆ ಮಾತನಾಡಿ, ರೈತರ ಪಂಪ್ ಸೆಟ್ ಕಳ್ಳರನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದರು.