ಡಿ.ಕೆ ಸುರೇಶ್ ಗೆಲುವು ನಿಶ್ಚಿತ:ಸಿಎಂ ವಿಶ್ವಾಸ

(ಸಂಜೆವಾಣಿ ಪ್ರತಿನಿಧಿಯಿಂದ)
ರಾಮನಗರ,ಮಾ.೨೮:ಈ ಬಾರಿಯ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಅಪಾರ ಕುತೂಹಲ ಕೆರಳಿಸಿದ್ದು, ಹಾಲಿ ಸಂಸದ ಡಿ.ಕೆ ಸುರೇಶ್ ಅವರು ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅದಮ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಎಂಟೇ ತಿಂಗಳಲ್ಲಿ ೫ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಆದರೆ, ಬಿಜೆಪಿ ನೀಡಿದ ಭರವಸೆಗಳು ಒಂದನ್ನೂ ಈಡೇರಿಸಲಿಲ್ಲ. ಬಿಜೆಪಿಗೆ ಮತ ಹಾಕಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ತಮಗೆ ಮಾಹಿತಿ ಬರುತ್ತಿದ್ದು, ಈ ಆಧಾರದ ಮೇಲೆ ಹಾಲಿ ಸಂಸದ ಡಿ.ಕೆ ಸುರೇಶ್ ಗೆಲುವು ಶತ ಸಿದ್ಧ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಮೂಲಕವೇ ನೇರವಾಗಿ ಕನ್ನಡ ನಾಡಿನ ಜನತೆಯ ಖಾತೆಗೆ ಹಣ ಜಮೆ ಮಾಡುತ್ತಿದ್ದೇವೆ. ದಲಿತರು, ಮಹಿಳೆಯರೂ ಸೇರಿದಂತೆ ದುಡಿಯುವ ವರ್ಗಗಳ ಎಲ್ಲ ಮನೆ ಮನೆಗಳಿಗೂ ಗ್ಯಾರೆಂಟಿ ತಲುಪಿವೆ.ಇದು ಕಾಂಗ್ರೆಸ್ ಬದ್ಧತೆ, ಮತದಾರರು ಕೊಟ್ಟ ಒಂದೊಂದು ವೋಟಿಗೂ ಘನತೆ ತಂದಿದ್ದೇವೆ ಎಂದು ಹೇಳಿದರು
ಬಿಜೆಪಿ-ಜೆಡಿಎಸ್ ಕಾರ್ಯಕರ್ತರು, ಕುಟುಂಬಗಳಿಗೂ ನಮ್ಮ ಸರ್ಕಾರ ಹಣ ಜಮೆ ಮಾಡುತ್ತಿದೆ. ಪಕ್ಷ, ಜಾತಿ, ಧರ್ಮ ಯಾವುದನ್ನೂ ನೋಡದೆ ಇಡೀ ನಾಡಿನ ಜನತೆಗೆ ಅವರ ಕುಟುಂಬಗಳಿಗೆ ಉಚಿತ ಅಕ್ಕಿ, ಉಚಿತ ವಿದ್ಯುತ್ ಜತೆಗೆ ಮಹಿಳೆಯರ ಖಾತೆಗೆ ೨ ಸಾವಿರ ರೂಪಾಯಿ, ನಿರುದ್ಯೋಗಿಗಳ ಖಾತೆಗೆ ಭತ್ಯೆಯನ್ನು ಜಮೆ ಮಾಡುತ್ತಿದೆ. ಹೀಗೆ ಕಾಂಗ್ರೆಸ್ ಪಕ್ಷ ಪ್ರತಿಯೊಬ್ಬ ಮತದಾರರ ನಂಬಿಕೆ ಉಳಿಸಿಕೊಂಡಿದೆ ಎಂದು ವಿವರಿಸಿದರು.
ಬಿಜೆಪಿ ಸರ್ಕಾರ ಇದ್ದಾಗಲೂ ನೀವು ತೆರಿಗೆ ಕಟ್ಟಿದ್ದೀರಿ. ಆದರೆ ಬಿಜೆಪಿ ನಿಮ್ಮ ತೆರಿಗೆ ಹಣವನ್ನು ನಿಮಗಾಗಿ ಖರ್ಚು ಮಾಡಲಿಲ್ಲ. ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ ಬೆಲೆಯನ್ನು ವಿಪರೀತ ಹೆಚ್ಚಿಸಿ ನಿಮ್ಮ ತೆರಿಗೆ ಹಣವನ್ನೂ ನಿಮಗಾಗಿ ಖರ್ಚು ಮಾಡಲಿಲ್ಲ. ಆದರೆ ನಾವು ಪ್ರತೀ ತಿಂಗಳು ೪ ರಿಂದ ೫ ಸಾವಿರ ರೂಪಾಯಿಯನ್ನು ಪ್ರತಿ ಅರ್ಹ ಕುಟುಂಬಗಳಿಗೆ ನಮ್ಮ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಕಾಂಗ್ರೆಸ್ ಅಂದರೆ ಬಡವರ, ಮಧ್ಯಮ ವರ್ಗದವರ ಪರವಾಗಿ ಕೆಲಸ ಮಾಡುವ ಪಕ್ಷ ಎಂದರು.
ಕ್ಷೇತ್ರದ ಮತದಾರರು ನಿರ್ಧರಿಸಲಿ
ಹೀಗಾಗಿ ಜನರ ನಡುವೆ ನಿಂತು ಜನರ ದಿನನಿತ್ಯದ ಕಷ್ಟ ಸುಖಗಳಿಗೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೊ ಅಥವಾ ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ ಎನ್ನುವುದನ್ನು ಕ್ಷೇತ್ರದ ಮತದಾರರು ನಿರ್ಧರಿಸಿ ಆಗಿದೆ. ಡಿ.ಕೆ.ಸುರೇಶ್ ಅವರನ್ನು ಜನ ಗೆಲ್ಲಿಸಲು ತೀರ್ಮಾನಿಸಿ ಆಗಿದೆ ಎಂದರು.
ಕುಮಾರಸ್ವಾಮಿ ಅವರು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾಗ, ಮುಖ್ಯಮಂತ್ರಿ ಆಗಿದ್ದಾಗ ರಾಮನಗರ ಜಿಲ್ಲೆಯನ್ನು ಏಕೆ ಕಡೆಸಿದ್ದರು ಎನ್ನುವುದಕ್ಕೆ ಜನರಿಗೆ ಉತ್ತರಿಸಲಿ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಸಿ.ಸುಧಾಕರ್, ಮಂಕಾಳ ವೈದ್ಯ , ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ , ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್ ಸೇರಿ ರಾಮನಗರ ಜಿಲ್ಲೆಯ ಕಾಂಗ್ರೆಸ್ ಶಾಸಕರುಗಳು ಮತ್ತು ಜಿಲ್ಲಾ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.