ಡಿ.ಕೆ.ಶಿ, ಸಿದ್ದುಗೆ ಟೀಕೆ ಮಾಡುವುದಷ್ಟೇ ಕೆಲಸ

ಮೈಸೂರು: ನ.25:- ನೆರೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸಿಎಂ ಜೇಬಿನಲ್ಲಿ ದುಡ್ಡು ಇಟ್ಟುಕೊಂಡು ಓಡಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ರವಿ ಕುಮಾರ್, ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ನಿಯಮಾನುಸಾರ ಹಾನಿ ವರದಿ ಸಂಗ್ರಹಿಸಿ ಪರಿಹಾರ ನೀಡುತ್ತಾರೆ. ಕಾನೂನಾತ್ಮಕವಾಗಿ ನೆರೆ ಪರಿಹಾರ ನೀಡಲಾಗುವುದು. ಕಾಂಗ್ರೆಸ್ ಪಕ್ಷ ಒಂದು ನಿರುದ್ಯೋಗಿಗಳ ಕೂಟ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ಟೀಕೆ ಮಾಡುವುದಷ್ಟೇ ಕೆಲಸ ಎಂದು ವ್ಯಂಗ್ಯವಾಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 15ರಿಂದ 16ಸ್ಥಾನಗಳು ಬಿಜೆಪಿ ಗೆಲ್ಲುತ್ತದೆ. ವಿಧಾನ ಪರಿಷತ್ ನಲ್ಲಿ ಬಹುಮತ ಸಾಬೀತು ಮಾಡಲು 12 ಸ್ಥಾನಗಳು ಮಾತ್ರ ಅವಶ್ಯಕತೆ ಇದೆ. ಈ ಬಾರಿಯ ಚುನಾವಣೆಯಲ್ಲಿ ವಿಧಾನ ಪರಿಷತ್ ನಲ್ಲಿ ಬಿಜೆಪಿ ಬಹುಮತ ಗಳಿಸುವ ವಿಶ್ವಾಸ ಇದೆ. ರಾಜ್ಯದಲ್ಲಿ ನಡೆದ ಜನಸ್ವರಾಜ್ ಯಾತ್ರೆ ಯಶಸ್ವಿಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಅವಶ್ಯಕತೆ ಇಲ್ಲ. ಈಗಾಗಲೇ ಜೆಡಿಎಸ್ 7ಕ್ಷೇತ್ರಗಲ್ಲಿ ಮಾತ್ರ ಸ್ಪರ್ಧಿಸಿದೆ. ಉಳಿದ ಸ್ಥಾನಗಳಿಗೆ ಬೆಂಬಲ ನೀಡುವಂತೆ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾಗೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಹಾಗಾಗಿ ಈ ಬಾರಿಯ ಪರಿಷತ್ ಚುನಾವಣೆಗೆ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡುತ್ತೇವೆ ಎಂದು ರವಿಕುಮಾರ್ ತಿಳಿಸಿದರು.