ಡಿ.ಕಗ್ಗಲ್ ಗ್ರಾಮದಲ್ಲಿ ಪುರಾಣ ಪ್ರವಚನ ಕಲ್ಲಯ್ಯಜ್ಜನವರಿಗೆ  ತುಲಾಭಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.31: ಅಂಧ-ಅನಾಥ ಮಕ್ಕಳನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ತಂದು ಸೇರಿಸಿ. ಅವರಿಗೆ ಉಚಿತವಾಗಿ ಶಿಕ್ಷಣ, ಆಶ್ರಯ ನೀಡಿ ಅವರ ಬದುಕು ರೂಪಿಸುತ್ತೇವೆ
ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ  ಕಲ್ಲಯ್ಯಜ್ಜನವರು ತಿಳಿಸಿದರು.
ಅವರು ನಿನ್ನೆ ತಾಲೂಕಿನ ಡಿ.ಕಗ್ಗಲ್ ಗ್ರಾಮದಲ್ಲಿ ಜರುಗಿದ 11ನೇ ವರ್ಷದ ಪುರಾಣ ಪ್ರವಚನದ ಸಮಾರೋಪ, ಶ್ರೀ ಸಿದ್ಧಾರೂಢಸ್ವಾಮಿಗಳ ಪುರಾಣ ಮಹಾಮಂಗಳ ಹಾಗೂ ತುಲಾಭಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗದುಗಿನ ಪುಣ್ಯಾಶ್ರಮಕ್ಕೆ ಭಕ್ತರೇ ದೊಡ್ಡ ಶಕ್ತಿ. ಭಕ್ತರು ಇರುವವರೆಗೆಮಠಕ್ಕೆ ಬರವಿಲ್ಲ. ನೂರಾರು ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವಶಕ್ತಿ ಭಗವಂತ ನೀಡಿದ್ದಾನೆ. ಹೀಗಾಗಿ ಎಲ್ಲೇ ಅನಾಥರು, ಅಂಧರು ಕಂಡು ಬಂದರೆ
ನಮ್ಮ ಆಶ್ರಮಕ್ಕೆ ಕಳಿಸಿಕೊಡಿ. ಅವರ ಬದುಕು ಬದಲಾಯಿಸುವ ಪುಣ್ಯದ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದರು.
ಗದುಗಿನ ಪುಣ್ಯಾಶ್ರಮಕ್ಕೆ ಬಳ್ಳಾರಿ ಜಿಲ್ಲೆಯ ಸಾವಿರಾರು ಭಕ್ತರಿದ್ದಾರೆ.ಡಿ.ಕಗ್ಗಲ್, ಶ್ರೀಧರಗಡ್ಡೆ, ಗೆಣಿಕೆಹಾಳ್, ಶಿರಿಗೇರಿ, ಆಂಧ್ರದ ಹೊಳಲಗುಂದಿ ಸೇರಿದಂತೆ ಈ ಭಾಗದ ಹತ್ತಾರು ಹಳ್ಳಿಗಳು ಪ್ರತಿವರ್ಷ ಆಶ್ರಮಕ್ಕೆ ಸುಮಾರು 1 ಸಾವಿರ ಅಕ್ಕಿ ಪಾಕೆಟ್‌ಗಳಷ್ಟು ಕಳಿಸಿಕೊಡುತ್ತಾರೆ. ಮಠದ ಪ್ರಗತಿಗೆ ಈ
ಭಾಗದ ಭಕ್ತರು ಶ್ರಮಿಸುತ್ತಿದ್ದಾರೆ. ಪ್ರತಿವರ್ಷ ತುಲಾಭಾರಗಳನ್ನುಮಾಡುವ ಮೂಲಕ ಆಶ್ರಮಕ್ಕೆ ಕಾಣಿಕೆಗಳನ್ನು ಸಮರ್ಪಿಸುತ್ತಿದ್ದಾರೆ. ಭಕ್ತರು ನೀಡುವ ಪ್ರತಿಯೊಂದು ಕಾಣಿಕೆ, ಅಕ್ಕಿ ಮತ್ತಿತರ ಧವಸ
ಧಾನ್ಯಗಳು ಆಶ್ರಮದಲ್ಲಿರುವ ಮಕ್ಕಳ ದಾಸೋಹಕ್ಕೆ ಬಳಕೆಯಾಗುತ್ತದೆ. ಅವರ ಕಲ್ಯಾಣಕ್ಕೆ ಬೇಕಾದ ಚಟುವಟಿಕೆಗಳಿಗೆ ಭಕ್ತರ ಕಾಣಿಕೆಗಳನ್ನು
ಬಳಸಿಕೊಳ್ಳಲಾಗುತ್ತಿದ್ದು, ದಾನ-ಧರ್ಮದಿಂದ ಬಂದ ವಸ್ತುವನ್ನು ಸತ್ಕಾರ್ಯಕ್ಕಾಗಿ ವಿನಿಯೋಗಿಸಲಾಗುತ್ತಿದೆ ಎಂದು ಕಲ್ಲಯ್ಯಜ್ಜನವರು ತಿಳಿಸಿದರು.
ಪುರಾಣ ಪ್ರವಚನ ಮಾಡಿದ ಗದುಗಿನ ಶಶಿಧರಶಾಸ್ತ್ರಿ ಹಿರೇಮಠ ಡೋಣಿ ಅವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಆಧ್ಯಾತ್ಮಿಕ ಜೀವನ ಹಾಗೂ ಭಕ್ತರ ಕಲ್ಯಾಣಕ್ಕಾಗಿ ಮಾಡಿದ ಅನೇಕ ಪವಾಡಗಳ ಕುರಿತು ವಿವರಿಸಿದರಲ್ಲದೆ,
ಸಿದ್ಧಾರೂಢರು ಭಕ್ತರ ಪ್ರೇಮಿಯಾಗಿದ್ದರು. ಸಂಕಷ್ಟದಲ್ಲಿದ್ದವರ ಪಾಲಿಗೆ ಸಂಜೀವಿನಿಯಾಗಿದ್ದರು ಎಂದು ತಿಳಿಸಿದರು.
ಜಂಗಮರ ಹೊಸಹಳ್ಳಿಯ ಅಜಾತ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ದೊಡ್ಡ ಬಸವಗವಾಯಿ ಡಿ.ಕಗ್ಗಲ್ ಅವರು ಪುರಾಣ ಓದಿದರು. ಯೋಗೇಶಕುಮಾರ್ ಸಂಗನಕಲ್ಲು ತಬಲಾ ಸಾಥ್ ನೀಡಿದರು. ಇದೇ ವೇಳೆ ಶ್ರೀಕಲ್ಲಯ್ಯಜ್ಜ ಅವರಿಗೆ 12 ತುಲಾಭಾರಗಳನ್ನು ಭಕ್ತವೃಂದ ಸಮರ್ಪಿಸಿತು. ಮುಂದಿನ ವರ್ಷದ ಪುರಾಣ ಪ್ರವಚನದಲ್ಲಿ 26  ತುಲಾಭಾರ ಸೇವೆಗೆ ಗ್ರಾಮಸ್ಥರು ಒಪ್ಪಿಗೆ ನೀಡಿದರು. ಗ್ರಾಮದ ಶ್ರೀ ಪಂಚಾಕ್ಷರಿ ಕಲ್ಚರಲ್ ಟ್ರಸ್ಟ್ ಹಾಗೂ ಡಿ.ಕಗ್ಗಲ್ ಗ್ರಾಮದ ಸಕಲ ಭಕ್ತರಿಂದ ಪುರಾಣ ಪ್ರವಚನ ಹಮ್ಮಿಕೊಳ್ಳಲಾಗಿತ್ತು. 15 ದಿನಗಳ ಪುರಾಣ ಪ್ರವಚನಕ್ಕೆ ಡಿ.ಕಗ್ಗಲ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

One attachment • Scanned by Gmail