ಡಿ.ಕಗ್ಗಲ್‌ನಲ್ಲಿ  ಶ್ರೀಕಲ್ಲಯ್ಯಜನವರಿಗೆ 27 ತುಲಾಭಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜೂ,3- ಜಿಲ್ಲೆಯ ಕುರುಗೋಡು ತಾಲೂಕಿನ ಡಿ.ಕಗ್ಗಲ್ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲ ಹಾಗೂ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮದ ಗ್ರಾಮದ ಸದ್ಭಕ್ತರ ಸಮಕ್ಷಮದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಭಕ್ತ ಸಮೂಹದಿಂದ 27 ತುಲಾಭಾರ ಸ್ವೀಕರಿಸಿದ ಮಾತನಾಡಿದ ಶ್ರೀ ಕಲ್ಲಯ್ಯಜ್ಜನವರು, ವೀರೇಶ್ವರ ಪುಣ್ಯಾಶ್ರಮ ಅಂಧ-ಅನಾಥರಿಗೆ ಆಶ್ರಯ ನೀಡಿದೆಯಲ್ಲದೆ ಸಂಗೀತ ಶಿಕ್ಷಣ ನೀಡಿ, ಅಂಧರಿಗೆ ಬದುಕು ಕಲ್ಪಿಸುವ ಆಶ್ರಯತಾಣವಾಗಿದೆ. ಡಿ.ಕಗ್ಗಲ್ ಗ್ರಾಮಸ್ಥರು ಪ್ರತಿವರ್ಷ ಭತ್ತ ಮತ್ತಿತರ ಧವಸ ಧಾನ್ಯಗಳನ್ನು ಆಶ್ರಮಕ್ಕೆ ನೀಡುವುದರ ಜೊತೆಗೆ ಪ್ರತಿವರ್ಷ ತುಲಾಭಾರ ನೆರವೇರಿಸಿ, ಆಶ್ರಮದ ಅಂಧ ಅನಾಥರಿಗೆ ದಾಸೋಹ ಕಲ್ಪಿಸುವ ಸೇವೆಯಲ್ಲಿ ಕೈ ಜೋಡಿಸಿದ್ದಾರೆ ಎಂದು ಸ್ಮರಿಸಿದರು.
ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿದ್ದು ಸಂಗೀತ ಶಿಕ್ಷಣ ಪಡೆದವರು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಸಮಾಜದಲ್ಲಿ ಯಾವುದೇ ಅಂಧ ಅನಾಥ ಮಕ್ಕಳಿದ್ದರೆ ನಮ್ಮ ಮಠಕ್ಕೆ ಕಳಿಸಿಕೊಡಿ. ಅವರಿಗೆ ಅನ್ನ, ಆಶ್ರಯ ಹಾಗೂ ಸಂಗೀತ ಶಿಕ್ಷಣ ಕೊಡಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಶ್ರೀಗಳು ಹೇಳಿದರು.
ಗ್ರಾಮದ ಈಶ್ವರ ದೇವಸ್ಥಾನ ಆವರಣದಲ್ಲಿ ಜರುಗಿದ 15 ದಿನಗಳ ಶ್ರೀ ಶರಣಬಸವೇಶ್ವರರ ಪುರಾಣವನ್ನು ಪ್ರಭಯ್ಯ ಶಾಸ್ತ್ರಿ ಹಿರೇಮಠ ಅವರು ಪ್ರವಚನ ಮಾಡಿದರು. ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಹಾರ್ಮೋನಿಯಂ ಹಾಗೂ ಯೋಗೀಶ್ ಕುಮಾರ್ ಸಂಗನಕಲ್ಲು ತಬಲಾ ಸಾಥ್ ನೀಡಿದರು.
ಮುಂದಿನ ವರ್ಷದ ಪುರಾಣ ಮಹಾಮಂಗಲ ಕಾರ್ಯಕ್ರಮ ವೇಳೆ ತುಲಾಭಾರ ನೆರವೇರಿಸಲು 22 ಜನ ಭಕ್ತರು ಹೆಸರು ನೊಂದಾಯಿಸಿದರು.
ಗ್ರಾಮದ ಶ್ರೀ ಪಂಚಾಕ್ಷರಿ ಕಲ್ಚರಲ್ ಟ್ರಸ್ಟ್‌ ಹಾಗೂ ಗ್ರಾಮದ ಸಕಲ ಸದ್ಭಕ್ತರಿಂದ ಪುರಾಣ ಪ್ರವಚನ ಹಾಗೂ ಶ್ರೀಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿತ್ತು.