ಡಿ.ಎನ್ ಅಕ್ಕಿಗೆ ಗ್ಲೋಬಲ್ ಅಚೀವರ್ಸ್ ಅವಾರ್ಡ್

ಕಲಬುರಗಿ,ಮಾ.27:ಇಂಡೋನೇಷಿಯಾ ಕೌನ್ಸಲೇಟ್ ಸಹಯೋಗದಲ್ಲಿ ವಿಶ್ವವಾಣಿ ದಿನಪತ್ರಿಕೆಯು ಪ್ರತಿ ವರ್ಷ ಕೊಡಮಾಡುವ ಅಂತಾರಾಷ್ಟ್ರೀಯ ಪ್ರತಿಷ್ಠಿತ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಪ್ರಶಸ್ತಿಗಾಗಿ ಸಾಹಿತಿ, ಸಂಶೋಧಕ, ಚಿತ್ರಕಲಾವಿದ ಡಿ.ಎನ್. ಅಕ್ಕಿ ಅವರನ್ನು ಆಯ್ಕೆ ಮಾಡಿದೆ.
ವಿವಿಧ ಕ್ಷೇತ್ರಗಳಲ್ಲಿಯ ಅಪೂರ್ವ ಸಾಧಕರನ್ನು ಗುರುತಿಸಿರುವ ಈ ಸಂಸ್ಥೆಗಳು ಇಂಡೋನೇಷಿಯಾದ ಬಾಲಿಯಲ್ಲಿ ಮಾ. 30ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿವೆ.ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ ಡಿ.ಎನ್. ಅಕ್ಕಿ ಅವರು ಚಿತ್ರಕಲೆಯ ನಿವೃತ್ತ ಶಿಕ್ಷಕರು. ಸಗರನಾಡಿನ ಶಾಸನಗಳ ಸಂಶೋಧನೆ, ವ್ಯಕ್ತಿಚಿತ್ರಗಳು, ಜೈನ ಸಾಹಿತ್ಯ, ಜಾನಪದೀಯ ಸಾಹಿತ್ಯ, ರೇಡಿಯೋ ನಾಟಕಗಳು-ಚಿಂತನೆಗಳು ಹೀಗೆ ವಿವಿಧ ವಲಯಗಳಲ್ಲಿ 19ಕ್ಕೂ ಹೆಚ್ಚು ಕೃತಿಗಳನ್ನು ಹಾಗೂ ರಾಜ್ಯ ಹಾಗೂ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು ಸೇರಿದಂತೆ 36ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕ್ಷೇತ್ರ ಶ್ರವಣ ಬೆಳಗೊಳದ ಜೈನ ಅಧ್ಯಯನ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸೇರಿದಂತೆ ಪ್ರತಿಷ್ಠಿತ ಸಂಘಸಂಸ್ಥೆಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ತಮ್ಮ ತಾಯಿ ಶ್ರೀಕಾಂತಮ್ಮ ಅಕ್ಕಿ ಅವರಿಂದ ಜಾನಪದ ಹಾಡುಗಳನ್ನು ಹಾಡಿಸಿ, ಅವುಗಳ ಧ್ವನಿಮುದ್ರಣವೂ ಮಾಡಿ, ಪ್ರಕಟಿಸಿದ ಇವರ ಹಡದವ್ವ ಹಾಡ್ಯಾಳಕೃತಿಯು ಕನ್ನಡ ಜಾನಪದ ಸಾಹಿತ್ಯ ಕ್ಷೇತ್ರಕ್ಕೊಂದು ವಿಶೇಷ ಕೊಡುಗೆ ಎನಿಸಿದೆ. ಡಿ.ಎನ್. ಅಕ್ಕಿ ಅವರು ಮಾ. 28ರಂದು ಸಂಜೆ ಬೆಂಗಳೂರಿನಿಂದ ಇಂಡೋನೇಷಿಯಾಗೆ ತೆರಳಲಿದ್ದಾರೆ.