ಡಿಸ್ಟಿಲರಿಗೆ ಬೆಂಕಿ; ಕಾರ್ಮಿಕ ಸಾವು

ಹರಪನಹಳ್ಳಿ.ಜ.೯;  ತಾಲ್ಲೂಕಿನ ದುಗ್ಗಾವತ್ತಿ ಗ್ರಾಮದ ಬಳಿಯಿರುವ ಜಾನ್ ಡಿಸ್ಟಿಲರಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಓರ್ವ ಕಾರ್ಮಿಕ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. 
ಮೃತಪಟ್ಟ ಕಾರ್ಮಿಕನನ್ನು ಮಾಗಡಿ ಗ್ರಾಮದ ರಘು(38) ಎಂದು ಗುರುತಿಸಲಾಗಿದೆ. ತಾಲ್ಲೂಕಿನಲ್ಲಿರುವ ಡಿಸ್ಟಿಲರಿ ಕಾರ್ಖಾನೆ ಮಾಜಿ ಸಚಿವ, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದವರಿಗೆ ಸೇರಿದ್ದಾಗಿದೆ. ಡಿಸ್ಟಿಲರಿಯನ್ನು ಬೆಂಗಳೂರು ಮೂಲದ ಉದ್ಯಮಿಗೆ ಲೀಜ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಆಕಸ್ಮಿಕವಾಗಿ ಬೆಂಕಿ ಕಾರ್ಖಾನೆಗೆ ತಗುಲಿದ್ದು, ಮೂವರು ಕಾರ್ಮಿಕರಿಗೆ ಗಂಭೀರ ಗಾಯವಾಗಿತ್ತು. ಸಮೀಪದ ತೆಲಿಗಿ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಓರ್ವ ಮರಣ ಹೊಂದಿದ್ದು, ಇಬ್ಬರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟು  ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಎಂ.ಎಲ್.ನಂದೀಶ್, ಪಿಎಸ್‌ಐ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.