ಡಿಸೇಲ್, ಪೆಟ್ರೋಲ್ ಮಿಶ್ರಿತ-ಚಾಲಕರ ಪರದಾಟ

ಬ್ಯಾಡಗಿ,ಮೇ22: ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿರುವ ನೇತ್ರಾವತಿ ಪೆಟ್ರೋಲ್ ಬಂಕ್’ನಲ್ಲಿ ಕಾರ್ಮಿಕರ ನಿರ್ಲಕ್ಷ್ಯತನದಿಂದ ಪೆಟ್ರೋಲ್ ಹಾಗೂ ಡಿಸೇಲ್ ಟ್ಯಾಂಕಗಳಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ಮಿಶ್ರಿತವಾಗಿ ವಾಹನ ಚಾಲಕರು ಪರದಾಡಿದ ಪ್ರಸಂಗ ಬುಧವಾರ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ
ಮೇ. 19ರಂದು ಪಟ್ಟಣದ ನೇತ್ರಾವತಿ ಪೆಟ್ರೋಲ್ ಬಂಕ್’ಗೆ ಮಂಗಳೂರಿನಿಂದ ಟ್ಯಾಂಕರ ಮೂಲಕ ಪೂರೈಕೆಯಾಗಿದ್ದ ಪೆಟ್ರೋಲ್ ಹಾಗೂ ಡಿಸೇಲ್ ಇಂದನವನ್ನು ಬಂಕನ ಟ್ಯಾಂಕರಗಳಿಗೆ ಹಾಕುವ ವೇಳೆ ಪೈಪ್ ಅದಲು ಬದಲಾದ ಪರಿಣಾಮ ಈ ಘಟನೆ ಜರುಗಿದೆ. ಬಳಿಕ ಕೆಲವರು ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಂಡ ವಾಹನ ಕಿರಿಕಿರಿ ಉಂಟು ಮಾಡಿದ ತಕ್ಷಣ ದೂರು ಸಲ್ಲಿಸಿದ ನಂತರ ಸಮಸ್ಯೆಯ ಹಿನ್ನಲೆಯು ಗೊತ್ತಾಗಿದೆ. ತಕ್ಷಣ ಮಾಲೀಕರು ಇಂಧನ ವಿತರಣೆ ಸ್ಥಗಿತಗೊಳಿಸಿ, ಬಂಕ್ ಬಂದ್ ಮಾಡಿದ್ದಾರೆ. ಈ ಕುರಿತು ತಹಶೀಲ್ದಾರ ಅವರ ಗಮನಕ್ಕೆ ಬಂದಿದ್ದು, ಆಹಾರ ವಿಭಾಗದ ಜಿಲ್ಲಾಧಿಕಾರಿಗಳಿಗೆ ವಿಷಯ ತಲುಪಿಸಿ ಕ್ರಮಕ್ಕೆ ಸೂಚಿಸಿದ್ದಾರೆ.
ಶುಕ್ರವಾರ ಭೇಟಿ ನೀಡಿದ ಅಧಿಕಾರಿಗಳು
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲಾ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಅವರು ಶುಕ್ರವಾರ ಮಧ್ಯಾಹ್ನ ಬಿಪಿಸಿಎಲ್ ಅಧಿಕಾರಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಬಂಕಿನ ಟ್ಯಾಂಕರನಲ್ಲಿ ಸಂಗ್ರಹವಾಗಿದ್ದ ಪೆಟ್ರೋಲ್ ಹಾಗೂ ಡಿಸೇಲ್ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಿದ್ದಾರೆ. ಎರಡೂ ಇಂಧನ ಮಿಶ್ರಿತವಾಗಿರುವುದು ಖಚಿತವಾಗಿದೆ. ಈ ಬಗ್ಗೆ ಬಂಕ್ ಮಾಲೀಕರಿಗೆ ನೋಟಿಸ್ ನೀಡಿರುವ ಅವರು ಟ್ಯಾಂಕ್ ಸಂಪೂರ್ಣವಾಗಿ ಸ್ವಚ್ಛ ಮಾಡಿದ ನಂತರ ತೈಲ ಅಧಿಕಾರಿಗಳು ಪರವಾನಿಗೆ ಪಡೆದು ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಬಂಕಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಿತರಣೆಯು ಎರಡು ದಿನಗಳ ನಂತರ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ತೂಕ ಮತ್ತು ಅಳತೆ ವಿಭಾಗಾಧಿಕಾರಿ ಜಿ.ಸಿ.ಸಂಕಪ್ಪ ಆಹಾರ ನಿರೀಕ್ಷಕ ಪಿ.ಎಂ.ದೊಡ್ಡಮನಿ, ಸಹಾಯಕ ಶಬ್ಬೀರ್ ಕಳ್ಯಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.