ಡಿಸೆಂಬರ್ 27ರಿಂದ ಕುಷ್ಠರೋಗ ಪತ್ತೆ ಅಭಿಯಾನ

ಕೋಲಾರ, ಡಿ,೮-ಜಿಲ್ಲಾದ್ಯಂತ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ (ಎಲ್.ಸಿ.ಡಿ.ಸಿ) ಕಾರ್ಯಕ್ರಮವನ್ನು ಡಿಸೆಂಬರ್ ೨೭, ೨೦೨೩ ರಿಂದ ಜನವರಿ ೧೧, ೨೦೨೪ ರವರೆಗೆ ಹಮ್ಮಿಕೊಳ್ಳಲಾಗಿದ್ದು, ಅಭಿಯಾನದ ಯಶಸ್ವಿಗೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.
ನಗರದ ಜಿಲ್ಲಾ ಜಿಢಳಿತಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ೨೦೨೩-೨೪ನೇ ಸಾಲಿನ ಕುಷ್ಠರೋಗಪ್ರಕರಣ ಪತ್ತೆ ಹಚ್ಚುವ ಅಭಿಯಾನದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕುಷ್ಠರೋಗವನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಅಂಗವೈಕಲ್ಯತೆ ತಡೆಗಟ್ಟುವಂತೆ ಗುಣಮಟ್ಟದ ಸಮೀಕ್ಷೆ ಮಾಡುವಂತೆ ತಿಳಿಸಿದರು.
ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ ಕಾರ್ಯಕ್ರಮ ಜಿಲ್ಲೆಯಾದ್ಯಂತ ನಡೆಯಲಿದ್ದು ಮನೆ ಮನೆಗೆ, ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ ಸಮೀಕ್ಷೆ ನಡೆಸಬೇಕು. ಕುಷ್ಠರೋಗ ಚಿಹ್ನೆಗಳು ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಪರೀಕ್ಷೆ ಮಾಡಿಸಲು ಕ್ರಮ ವಹಿಸಬೇಕು. ಗ್ರಾಮಗಳಲ್ಲಿ ಗುಂಪು ಸಭೆ, ತಾಯಂದಿರ ಸಭೆ ಮೂಲಕ ಆರೋಗ್ಯ ಶಿಕ್ಷಣ ನೀಡಬೇಕೆಂದರು.
ಆರೋಗ್ಯ ಇಲಾಖೆಯವರು ಶಾಲೆಗಳಿಗೆ ಭೇಟಿ ಕೊಟ್ಟಾಗ ಮಕ್ಕಳು ಹಾಗೂ ಶಿಕ್ಷಕರ ಭಾಗವಹಿಸುವಿಕೆ ಅಗತ್ಯವಾಗಿದೆ. ಶಾಲೆಯಲ್ಲಿರುವ ಮಕ್ಕಳ ತಪಾಸಣೆ ಮಾಡಲು ಬಂದಾಗ ಆಯಾ ಶಾಲೆಯ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ತಂಡದವರೊಂದಿಗೆ ಸಹಕರಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಿಗೆ ಸಮೀಕ್ಷಾ ತಂಡದವರು ಭೇಟಿ ನೀಡಿದಾಗ ತಪಾಸಣೆಗೆ ಸಹಕರಿಸಬೇಕು ಎಂದು ಹೇಳಿದರು.
ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಎಂ.ಸಿ. ನಾರಾಯಣಸ್ವಾಮಿ ಅವರು ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ ಕುಷ್ಠರೋಗ ಹೊಸ ಪ್ರಕರಣಗಳು ೨೦೨೩ನೇ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಒಟ್ಟು ೧೮ ಪ್ರಕರಣಗಳು ದಾಖಲಾಗಿದೆ. ಕುಷರೋಗದ ಬಗ್ಗೆ ಸಮಾಜದಲ್ಲಿ ಬೇರೂರಿರುವ ತಪ್ಪು ತಿಳುವಳಿಕೆ ಮತ್ತು ಅರಿವಿನ ಕೊರತೆ, ಕುಷ್ಟರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸಿ, ಕುಷ್ಟರೋಗಿಗಳಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಆಂದೋಲನವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ್, ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿಜಯ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಾರಿಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.