ಡಿಸೆಂಬರ್ ವೇಳೆಗೆ ಹಾಗಲವಾಡಿ ಕೆರೆಗೆ ಹೇಮಾವತಿ ನೀರು

ಚೇಳೂರು, ಸೆ. ೨೫- ದಶಕಗಳಿಂದ ನೀರು ಕಾಣದೆ ಇರುವಂತಹ ಹಾಗಲವಾಡಿ ಗ್ರಾಮದ ಕೆರೆಗೆ ನವೆಂಬರ್ ಅಂತ್ಯದ ವೇಳೆಗೆ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಿ ಡಿಸೆಂಬರ್ ವೇಳೆಗೆ ಹೇಮಾವತಿ ನೀರನ್ನು ಹರಿಸಲಾಗುವುದು ಎಂದು ಕಾವೇರಿ ನಿಗಮದ ಜಯಪ್ರಕಾಶ್ ಭರವಸೆ ನೀಡಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಹರದಗೆರೆ ಗ್ರಾಮದಿಂದ ಹಿಡಿದು ಹಾಗಲವಾಡಿಯವರೆಗೆ ಹೇಮಾವತಿ ನಾಲೆಗಳನ್ನು ಹಾಗೂ ನಾನಿ ಹಾಗಲವಾಡಿ ಹರದಗೆರೆ ಕೆರೆಯನ್ನು ವೀಕ್ಷಿಸಿ ಅವರು ಮಾತನಾಡಿದರು.
ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ನಿರ್ದೇಶನದಂತೆ ಕಲಾಪ ನಡೆಯುತ್ತಿದ್ದರೂ ಸಹ ಅದನ್ನು ಬದಿಗಿಟ್ಟು ಹಾಗಲವಾಡಿ ಕೆರೆಗೆ ನೀರು ಹರಿಸಲೇಬೇಕು ಎಂದು ತೀರ್ಮಾನಿಸಿ ಖುದ್ದು ನಾನೇ ನಮ್ಮ ಅಧಿಕಾರಿಗಳ ಜೊತೆಯಲ್ಲಿ ಬಂದಿದ್ದು ಇಲ್ಲಿರುವಂತಹ ಎಲ್ಲ ಸಮಸ್ಯೆಗಳನ್ನು ರೈತರ ಮೂಲಕ ಕೇಳಿಕೊಂಡಿದ್ದೇನೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಹಾಗಲವಾಡಿ ಕೆರೆಗೆ ನೀರು ಹರಿಸುವ ಯೋಜನೆಯನ್ನು ಮಾಡಲಾಗುತ್ತದೆ. ಹಾಗಲವಾಡಿ ಕೆರೆಗೆ ನೀರು ಹರಿಸುವ ಮಾರ್ಗಮಧ್ಯದಲ್ಲಿ ಕೆಲವು ರೈತರಿಗೆ ಪರಿಹಾರ ನೀಡಿಲ್ಲ ಎನ್ನುವ ವಿಚಾರ ತಿಳಿದಿದ್ದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರದಲ್ಲೇ ಅವರಿಗೆ ಪರಿಹಾರದ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ರೈತರಿಗೆ ಅಂತಿಮವಾಗಿ ಪರಿಹಾರದ ಅವಾರ್ಡ್ ನೋಟಿಸ್ ನೀಡಿ ಅವರಿಂದ ಜಾಗವನ್ನು ಬಿಡಿಸಿಕೊಂಡು ಹಾಗಲವಾಡಿ ಕೆರೆಗೆ ನೀರು ಹರಿಸಲಾಗುವುದು ಎಂದರು.
ಹಾಗಲವಾಡಿ ಕೆರೆಗೆ ನೀರು ಹರಿಸುವಂತಹ ನಾಲೆಗಳಲ್ಲಿ ಸೀಪೇಜ್ ಹರಿದು ಬೇರೆ ತೋಟ ಹೊಲಗಳಿಗೆ ಹರಿಯುತ್ತಿರುವುದು ಸಹ ಕಂಡು ಬರುತ್ತಿದ್ದು ಅದನ್ನು ಕೂಡಲೇ ಗುಣಮಟ್ಟದಿಂದ ಸಿಮೆಂಟ್ ಮಾಡಿ ಎಲ್ಲಿಯೂ ಕೂಡ ನೀರು ಅನಗತ್ಯವಾಗಿ ವ್ಯರ್ಥವಾಗದಂತೆ ಸಲೀಸಾಗಿ ನೀರು ಕೆರೆಗೆ ಸೇರಬೇಕು ಎಂಬುದನ್ನು ಸಹ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಹೇಮಾವತಿ ನಾಲೆ ತೆಗೆಯುವಂತಹ ಸಂದರ್ಭದಲ್ಲಿ ಬ್ಲಾಸ್ಟಿಂಗ್ ಮಾಡಿದಂತಹ ಸಂದರ್ಭದಲ್ಲಿ ಕೆಲವು ಮನೆಗಳಿಗೆ ಹಾನಿಯಾಗಿದೆ ಅವುಗಳಿಗೂ ಸಹ ಪರಿಹಾರವನ್ನು ಕೂಡಲೇ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು .
ಹಲವು ಭಾಗದಲ್ಲಿ ತುಂಬಾ ಆಳವಾಗಿ ನಾಲೆ ತೋಡಿರುವುದರಿಂದ ಮಣ್ಣು ಕುಸಿಯುವ ಅಂಶವಿರುವುದರಿಂದ ಆ ಭಾಗದಲ್ಲಿ ಪೈಪ್‌ಲೈನ್ ಮೂಲಕವೇ ನೀರನ್ನು ಹರಿಸುವಂತಹ ಯೋಜನೆ ಮಾಡಲು ಕೂಡ ಅಧಿಕಾರಿಗಳಿಗೆ ಸೂಚಿಸಿದರು.
ಬಿಜೆಪಿ ಮುಖಂಡ ಎಸ್. ಡಿ. ದಿಲೀಪ್‌ಕುಮಾರ್ ಮಾತನಾಡಿ, ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ಯವರ ಪರಿಶ್ರಮದಿಂದಾಗಿ ಹಾಗೂ ಅವರ ಆಲೋಚನೆಗಳಿಂದಾಗಿ ಹಾಗಲವಾಡಿ ಕೆರೆಗೆ ನೀರು ಹರಿಸಲು ಎಲ್ಲಾ ರೀತಿಯ ಸಿದ್ಧತೆಗಳಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮಸ್ಯೆಯಾಗಿದ್ದು ಈಗ ಖುದ್ದು ಸಚಿವರೆ ನಿಗಮದ ಎಂ.ಡಿ ಅವರನ್ನು ಸ್ಥಳಕ್ಕೆ ಕಳುಹಿಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ.
ಮತ್ತು ಬೋಗಸಂದ್ರದ ಗ್ರಾಮದಿಂದ ಹಾಗಲವಾಡಿಯ ಕೆರೆಯವರೆಗೂ ಸಹ ನಾಲೆಗಳಿಗೆ ಗುಣಮಟ್ಟದ ಸಿಮೆಂಟ್ ಲೈನಿಂಗ್ ಮಾಡಿದಾಗ ನೀರು ಪೋಲಾಗುವುದನ್ನು ತಡೆದು ಬರುವಂತಹ ಎಲ್ಲಾ ನೀರು ಸಹ ಕೆರೆಗೆ ತಲುಪುವುದರಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಸದಸ್ಯ ಪ್ರಕಾಶ್, ಮೆಡಿಕಲ್ ಬಾಬು, ವಿಶ್ವನಾಥ್, ದಯಾನಂದ್, ಶಂಕರ್, ಲೋಕೇಶ್, ವಿಜಯಕುಮಾರ್, ಉದಯ್‌ಪುರ, ಚಿದಾನಂದ, ಕೃಷ್ಣ ಜಟ್ಟಿ, ಅಧಿಕಾರಿಗಳಾದ ಇ.ಇ ಮೋಹನ್, ಸಿ.ಈ. ಮಹೇಶ್, ವಿಶೇಷ ಭೂಸ್ವಾಧೀನ ಅಧಿಕಾರಿ ಯಶೋದಮ್ಮ ಉಪಸ್ಥಿತರಿದ್ದರು.