ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ

ಬೆಂಗಳೂರು,ಜೂ.೮- ರಾಜ್ಯದಲ್ಲಿ ಆಕ್ಟೊಬರ್ ನಿಂದ ಡಿಸೆಂಬರ್ ಒಳಗೆ ಅರ್ಹ ಎಲ್ಲರಿಗೂ ೨ ಡೋಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಇಂದಿಲ್ಲಿ ಹೇಳಿದ್ದಾರೆ
ಕೇಂದ್ರ ಸರ್ಕಾರವೇ ಲಸಿಕೆ ಖರೀದಿ ಮಾಡಿ ರಾಜ್ಯಕ್ಕೆ ಕೊಡುವುದರಿಂದ ಲಸಿಕ ಬೇಗ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರರಂಗದ ಮಂದಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಾಜ್ಯಕ್ಕೆ ಒಟ್ಟಾರೆ ೧೦ ಕೋಟಿ ಡೋಸ್ ಲಸಿಕೆ ಅಗತ್ಯ ಇದೆ ಎಂದು ಹೇಳಿದರು.
ಕೋವಿಡ್ ಸೋಂಕಿನಿಂದ ಎಲ್ಲಾ ವಲಯಗಳಿಗೂ ನಷ್ಟ ಆಗಿದೆ . ಇದರಿಂದ ಚಿತ್ರರಂಗವು ಹೊರತಾಗಿಲ್ಲ ಆದರೆ ಚಿತ್ರರಂಗಕ್ಕೆ ಅತಿಹೆಚ್ಚಿನ ಹೊಡೆತ ಬಿದ್ದಿದೆ ಇದರಿಂದ ಚಿತ್ರರಂಗದ ಮಂದಿ ಪಾರಾಗಬೇಕು ಎಂದು ಅವರು ಹೇಳಿದರು
ಚಿತ್ರರಂಗದ ಎಲ್ಲ ಸದಸ್ಯರು ಲಸಿಕೆ ಪಡೆಯುವುದರಿಂದ ಚಿತ್ರೀಕರಣ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ತೆರಳಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಸಿನಿಮಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ನಟರು , ನಿರ್ಮಾಪಕರು ಸೇರಿದಂತೆ ಎಲ್ಲರನ್ನು ಮುಂಚೂಣಿ ಕಾಯಕರ್ತರು ಎಂದು ಘೊಷಿಸಲಾಗಿದೆ.ಈ ಹಿನ್ನೆಲೆಯಲ್ಲಿ ಚಿತ್ರರಂಗದ ಮಂದಿಗೆ ಅಗತ್ಯವಿರುವ ಲಸಿಕೆಯನ್ನು ಬಿಬಿಎಂಪಿ ವತಿಯಿಂದ ಪೂರೈಕೆ ಮಾಡಬೇಕು ಎಂದು ಅವರು ಹೇಳಿದರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿಸಿ ಪಾಟೀಲ್ ಮಾತನಾಡಿ ಚಿತ್ರರಂಗದವರೂ ಸದ್ಯ ಸಂಕಷ್ಟದಲ್ಲಿದ್ದಾರೆ. ಚಿತ್ರರಂಗದವರಿಗೆ ಲಸಿಕೆ ಕಡಿಮೆಯಾಗದಂತೆ ಸಚಿವ ಸುಧಾಕರ್ ಭರವಸೆ ನೀಡಿದ್ದಾರೆ ಎಂದು ಹೇಳಿದರು
೧೮ ವರ್ಷ ಮೇಲ್ಪಟ್ಟವರಿಗೂ ಲಸಿಕೆ ಉಚಿತವಾಗಿ ಹಾಕಲಾಗುವುದು ಎಂದು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗೂ ಹಿರಿಯ ನಟಿ ತಾರಾ ಅನುರಾಧಾ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈ ರಾಜ್, ಮಾಜಿ ಅಧ್ಯಕ್ಷ ಸಾರಾ ಗೋವಿಂದು, ನಿರ್ಮಾಪಕರಾದ ಎನ್ ಎಂ ಸುರೇಶ್, ಎ.ಗಣೇಶ್, ನಿರ್ದೇಶಕ ನಾಗಣ್ಣ ನಟಿ ರೂಪಾ ಅಯ್ಯರ್ ಸೇರಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿಯ ಅನೇಕರು ಪಾಲ್ಗೊಂಡಿದ್ದರು.
ಅನ್ ಲಾಕ್ ಯಾವ ಮಾದರಿಯೂ ಇಲ್ಲ
ಜೂನ್ ೧೪ರ ನಂತರ ರಾಜ್ಯದಲ್ಲಿ ಅನ್ ಲಾಕ್ ಮಾಡುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರ ಕೈಗೊಳ್ಳಲಿದ್ದಾರೆ ಈ ವಿಷಯದಲ್ಲಿ ಯಾವ ರಾಜ್ಯವನ್ನು ಮಾದರಿಯಾಗಿ ಪರಿಗಣಿಸುವುದಿಲ್ಲ ಎಂದು ವೈದ್ಯಕೀಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಅನ್ ಲಾಕ್ ಮಾಡಿದರು ಕೋವಿಡ್ ಕೇರ್ ಸೆಂಟರ್ ಗಳು ಕಾರ್ಯಾರಂಭ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.