ಡಿಸೆಂಬರ್ ಮೊದಲ ವಾರದಲ್ಲಿ ಸಂಸತ್ ಅಧಿವೇಶನ

ನವದೆಹಲಿ,ನ.೧೨- ಗುಜರಾತ್ ವಿಧಾನಸಭಾ ಚುನಾವಣೆ ಮತದಾನ ಪೂರ್ಣಗೊಂಡ ನಂತರ ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಇನ್ನೂ ದಿನಾಂಕ ನಿಗದಿ ಮಾಡದಿದ್ದರೂ ಡಿಸೆಂಬರ್ ಮೂರನೇ ವಾರದವರೆಗೆ ಅಧಿವೇಶನ ನಡೆಯಬಹುದು ಎಂದು ಕೇಂದ್ರ ಸರ್ಕಾರದ ಉನ್ನತ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.
ಚಳಿಗಾಲದ ಅಧಿವೇಶನ ಸಾಮಾನ್ಯವಾಗಿ ನವೆಂಬರ್ ಮಧ್ಯದಲ್ಲಿ ಆರಂಭವಾಗುತ್ತದೆ, ಈ ಬಾರಿ ಎರಡು ದೊಡ್ಡ ಪಕ್ಷಗಳಾದ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಹಿಮಾಚಲ ಮತ್ತು ಗುಜರಾತ್ ಚುನಾವಣೆಗಳಲ್ಲಿ ನಿರತವಾಗಿವೆ.
ಹಿಮಾಚಲ ಪ್ರದೇಶಕ್ಕೆ ಇಂದು ಮತ್ತು ಗುಜರಾತ್‌ನಲ್ಲಿ ಎರಡು ಹಂತದ ಮತದಾನ ಡಿಸೆಂಬರ್ ೧ ಮತ್ತು ೫ ರಂದು ನಡೆಯಲಿದೆ. ಎರಡೂ ಚುನಾವಣೆಗಳ ಫಲಿತಾಂಶವನ್ನು ಡಿಸೆಂಬರ್ ೮ ರಂದು ಪ್ರಕಟವಾಗಲಿದೆ,
ಚಳಿಗಾಲದ ಅಧಿವೇಶನದ ಬಗ್ಗೆ ದಿನಾಂಕ ನಿಗದಿ ಮಾಡಲು ಇಲ್ಲಿಯವರೆಗೆ ಯಾವುದೇ ಔಪಚಾರಿಕ ಸಭೆ ನಡೆದಿಲ್ಲ, ಆದರೆ ಅನೌಪಚಾರಿಕ ಸಮಾಲೋಚನೆಗಳು ಪ್ರಾರಂಭವಾಗಿವೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.
ಡಿಸೆಂಬರ್ ಮೊದಲ ವಾರದಲ್ಲಿ ಅಧಿವೇಶನ ನಡೆಸಲು ಯೋಜಿಸುತ್ತಿದೆ, ಬಹುಶಃ ಡಿಸೆಂಬರ್ ೬ ಅಥವಾ ೭ ರಂದು. ಮತ್ತು ಅಧಿವೇಶನ ಆರಂಭವಾಗಿ ಡಿಸೆಂಬರ್ ೨೯ ರವರೆಗೆ ಮುಂದುವರೆಯಬಹುದು ಎಂದು ಹೇಳಲಾಗಿದೆ.
ಇತರೆ ರಾಜಕೀಯ ಪಕ್ಷಗಳ ಮುಖಂಡರ ಜತೆ ಮಾತನಾಡಿದ ನಂತರವೇ ನಿಖರ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಕೂಡ ತಿಳಸಲಾಗಿದೆ
೨೦೨೦ರ ಮಾರ್ಚ್‌ನಲ್ಲಿ ಕೋವಿಡ್ ಸೋಂಕು ದೇಶಾದ್ಯಂತ ಕಾಣಿಸಿಕೊಂಡ ನಂತರ ಆ ಸಮಯದಲ್ಲಿ ನಡೆಯುತ್ತಿದ್ದ ಬಜೆಟ್ ಅಧಿವೇಶನ ಏಳು ದಿನಗಳವರೆಗೆ ಮೊಟಕುಗೊಳಿಸಲಾಯಿತು. ಅದರ ನಂತರ ಸಂಸತ್ತಿನ ಅಧಿವೇಶನಗಳನ್ನು ಕನಿಷ್ಠ ಕೆಲವು ದಿನಗಳವರೆಗೆ ಮೊಟಕುಗೊಳಿಸಲಾಯಿತು ಹಾಗು ೨೦೨೦ ರ ಚಳಿಗಾಲದ ಅಧಿವೇಶನ ನಡೆಸಲಾಗಲಿಲ್ಲ.
ಹೊಸ ಸಂಸತ್ ಕಟ್ಟಡ ಸಜ್ಜು
ಹೊಸ ಸಂಸತ್ತಿನ ಕಟ್ಟಡ ಈ ಹಂತದಲ್ಲಿ ನಿಯಮಿತವಾದ ಅಧಿವೇಶನಗಳನ್ನು ಆಯೋಜಿಸಲು ಸಂಪೂರ್ಣವಾಗಿ ಸಿದ್ಧವಾಗಿಲ್ಲದಿದ್ದರೂ, ಡಿಸೆಂಬರ್ ೨೦ ರಂದು ಹೊಸ ಕಟ್ಟಡದಲ್ಲಿ ಅಧಿವೇಶನ ನಡೆಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.
ಕಳೆದ ವರ್ಷ, ನವೆಂಬರ್ ೨೧ ಮತ್ತು ಡಿಸೆಂಬರ್ ೨೨ ರ ನಡುವೆ ಚಳಿಗಾಲದ ಅಧಿವೇಶನ ನಡೆದಿತ್ತು. ೨೦೧೮ ರಲ್ಲಿ, ಚಳಿಗಾಲದ ಅಧಿವೇಶನ ಡಿಸೆಂಬರ್ ೧೧ ರಂದು ಪ್ರಾರಂಭವಾಗಿ ಮತ್ತು ೨೦೧೯ ರ ಜನವರಿ ೯ ರಂದು ಕೊನೆಗೊಂಡಿತ್ತು.
ಹಲವು ಮಸೂದೆ ಮಂಡನೆ
ಮುಂಬರುವ ಅಧಿವೇಶನದಲ್ಲಿ ಸರ್ಕಾರ ವೈಯಕ್ತಿಕ ಡೇಟಾ ಸುರಕ್ಷತೆ ಹೊಸ ಮಸೂದೆ ತರಲು ನಿರೀಕ್ಷಿಸಲಾಗಿದೆ. ವಿದ್ಯುತ್ (ತಿದ್ದುಪಡಿ) ಮಸೂದೆ, ಸ್ಪರ್ಧೆ (ತಿದ್ದುಪಡಿ) ಮಸೂದೆ, ನವದೆಹಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (ತಿದ್ದುಪಡಿ) ಮಸೂದೆ, ಮಧ್ಯಸ್ಥಿಕೆ ಮಸೂದೆ ಮತ್ತು ವನ್ಯಜೀವಿ (ರಕ್ಷಣೆ) ತಿದ್ದುಪಡಿ ಮಸೂದೆ ಸೇರಿದಂತೆ ೩೦ ಕ್ಕೂ ಹೆಚ್ಚು ಮಸೂದೆಗಳು ಸದನದ ಮುಂದೆ ಬಾಕಿ ಉಳಿದಿವೆ.