ಡಿಸೆಂಬರ್ ಅಂತ್ಯದೊಳಗೆ ನೂತನ ಪ್ರವಾಸೋದ್ಯಮ ನೀತಿ ಜಾರಿ

ಹುಬ್ಬಳ್ಳಿ, ಅ೨೯: ಡಿಸೆಂಬರ್ ಅಂತ್ಯದೊಳಗೆ ನೂತನ ಪ್ರವಾಸೋದ್ಯಮ ನೀತಿ ಜಾರಿಯಾಗಲಿದೆ ಎಂದು ರಾಜ್ಯ ಸಂಸದೀಯ ವ್ಯವಹಾರಗಳ ಹಾಗೂ ಕಾನೂನು ಖಾತೆ ಸಚಿವ ಎಚ್.ಕೆ. ಪಾಟೀಲ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ನೀತಿ ಜಾರಿಯ ಕುರಿತು ಈಗಾಗಲೇ ಪೂರ್ವ ಸಿದ್ಧತೆ ಆಗಿದೆ, ನಮ್ಮ ಸ್ಮಾರಕ ಸಂರಕ್ಷಣೆಗೆ ಏನು ಮಾಡಬೇಕು? ಎಂಬ ಕುರಿತು ಯೋಜಿಸಲು ತಾವು ರಾಜ್ಯಾದ್ಯಂತ ಪ್ರವಾಸ ಕೈಕೊಳ್ಳುತ್ತಿರುವುದಾಗಿ ತಿಳಿಸಿದರು.
ನವಂಬರ್ ೬ ರಿಂದ ಬೀದರ ಜಿಲ್ಲೆಯ ಬಸವಕಲ್ಯಾಣದಿಂದ ತಮ್ಮ ಪ್ರವಾಸ ಆರಂಭವಾಗಲಿದ್ದು ೧೦ ದಿನಗಳ ಕಾಲ ನಡೆಯಲಿದೆ ಎಂದು ಅವರು ಹೇಳಿದರು.
ಶಕ್ತಿ ಯೋಜನೆಯಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಎಂಟು ಪಟ್ಟು ಹೆಚ್ಚಳವಾಗಿದೆ ಎಂದು ಅವರು ನುಡಿದರು.
ಕಾಂಗ್ರೆಸ್ ಶಾಸಕರಿಗೆ ೫೦ ಕೋಟಿ ರೂ. ಆಮಿಷ ಒಡ್ಡಲಾಗುತ್ತಿದೆ ಎಂಬ ವಿಚಾರ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಯವರು ಆಪರೇಷನ್ ಕಮಲದಂಥ ನೀಚ ಕೆಲಸಕ್ಕೆ ಕೈಹಾಕುತ್ತಿದ್ದಾರೆ, ಸರ್ಕಾರಕ್ಕೆ ಧಕ್ಕೆ ತರುವ ಕೆಲಸ ಮಾಡಿದರೆ ಬಿಜೆಪಿ ಅಂತ್ಯ ಕಾಣುತ್ತದೆ ಎಂದು ಅವರು ಹೇಳಿದರು.
ಈಗಾಗಲೇ ಬಿಜೆಪಿಯವರು ಬುದ್ಧಿ ಕಲಿತಿದ್ದಾರೆ. ರಾಷ್ಟ್ರದಲ್ಲಿಯೇ ಅವರ ಮರ್ಯಾದೆ, ಪ್ರಭಾವ ಇಳಿದು ಹೋಯಿತು ಎಂದು ಪಾಟೀಲ್ ಕುಟುಕಿದರು.