ಡಿಸೆಂಬರ್‌ನಿಂದ ಹೊಸ ಮಾರ್ಗಸೂಚಿ ಅನ್ವಯ

ನವದೆಹಲಿ, ನ.೨೯- ಕೊರೊನಾದ ರೂಪಾಂತರಿ ತಳಿ ಓಮಿಕ್ರಾನ್ ಸೋಂಕು ಹಲವು ಕಡೆಗಳಲ್ಲಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಆರೋಗ್ಯ ಸಚಿವಾಲಯವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. ಡಿಸೆಂಬರ್ ೧ರಿಂದ ಹೊಸ ನಿಯಮಾವಳಿಗಳು ಅನುಷ್ಠಾನಕ್ಕೆ ಬರಲಿದೆ.
ಇದರ ಅನ್ವಯ ಪ್ರಯಾಣಿಕರು ತಮ್ಮ ಕೊನೆಯ ೧೪ ದಿನಗಳ ಪ್ರಯಾಣದ ವರದಿಯನ್ನು ನೀಡಬೇಕಿದ್ದು, ಹಾಗೂ ಏರ್ ಸುವಿಧಾ ಸೈಟ್‌ನಲ್ಲಿ ೭೨ ಗಂಟೆಗಳ ಒಳಗಿನ ತಮ್ಮ ಅರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕೂಡ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ. ಅಲ್ಲದೆ ಪ್ರಯಾಣಕ್ಕೂ ಮುಂಚಿತವಾಗಿ ಏರ್ ಸುವಿಧಾ ಸೈಟ್‌ನಲ್ಲಿ ಪ್ರಯಾಣಿಕರು ಸ್ವಘೋಷಣೆಯ ಅರ್ಜಿಯನ್ನು ಸಲ್ಲಿಸಬೇಕಿದೆ. ಅಪಾಯಕಾರಿ ದೇಶಗಳೆಂದು (ಕೊರೊನಾ ಸಂಬಂಧಿತ) ಪರಿಗಣಿಸಲ್ಪಟ್ಟ ರಾಷ್ಟ್ರಗಳಲ್ಲಿ ಸಂಚರಿಸಿದ್ದರೆ ಅಂಥ ಪ್ರಯಾಣಿಕರು ಏರ್‌ಪೋರ್ಟ್‌ನಲ್ಲೇ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಬೇಕಿದೆ. ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದರೆ ತೆರಳಬಹುದು. ಆದರೆ ಪಾಸಿಟಿವ್ ಆಗಿದ್ದರೆ ೭ ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದ್ದು, ಎಂಟನೇ ದಿನದಲ್ಲಿ ಮರುಪರೀಕ್ಷೆ ನಡೆಸಲಾಗುತ್ತದೆ.