ಡಿಸಿ ಹೊರತು ಪಡಿಸಿ ನಡಾವಳಿ : ಇದೆಂಥ ಕಾನೂನು ವ್ಯವಸ್ಥೆ?

ರಾಯಚೂರು.ಮಾ.೨೮- ನೇರ ನೇಮಕ ಮತ್ತು ನೇರ ಪಾವತಿ ಹಾಗೂ ಸಫಾಯಿ ಕರ್ಮಚಾರಿ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳೆ ಇಲ್ಲದೇ ಶಾಸಕರೊಬ್ಬರು ಮಹತ್ವದ ನಿರ್ಧಾರಗಳ ನಡಾವಳಿ ನಿರ್ಧರಿಸುವ ಅಪರೂಪ ರಾಯಚೂರಿನಲ್ಲಿ ಬಿಟ್ಟರೇ, ಬೇರೆ ಎಲ್ಲಿಯೂ ಕಾಣಲು ಸಾಧ್ಯವಿಲ್ಲವೆಂಬ ಅಚ್ಚರಿಯನ್ನು ಹೊರ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಸ್.ಮಾರೆಪ್ಪ ವ್ಯಕ್ತಪಡಿಸಿದರು.
ರಾಯಚೂರಿನಲ್ಲಿ ನಾವು ಪ್ರಜಾಪ್ರಭುತ್ವ ಮತ್ತು ಕಾನೂನು ವ್ಯವಸ್ಥೆಯಲ್ಲಿ ಇದ್ದೇವೋ ಅಥವಾ ಇಲ್ಲವೋ ಎನ್ನುವ ಗೊಂದಲ ನಿರ್ಮಾಣವಾಗುವಂತಹ ಆಡಳಿತ ವ್ಯವಸ್ಥೆಗೆ ಜಿಲ್ಲಾಧಿಕಾರಿಗಳು ಪೂರಕವಾಗಿ ವರ್ತಿಸುತ್ತಿದ್ದಾರೆ. ನಿನ್ನೆ ಶಾಸಕ ಡಾ.ಶಿವರಾಜ ಪಾಟೀಲ್ ಅವರ ಸಮ್ಮುಖದಲ್ಲಿ ನಡೆದ ಪೌರ ಕಾರ್ಮಿಕರ ಬೇಡಿಕೆಗಳ ಚರ್ಚೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಫ್ಯಾಬಸ್ ವೇತನ ಮಾದರಿಗೆ ಅನುಮೋದಿಸಿದಂತೆ ನಡಾವಳಿಯಲ್ಲಿ ಬರೆಯಲಾಗಿದೆ. ಆದರೆ, ನಮ್ಮ ಬೇಡಿಕೆ ನೇರ ಪಾವತಿಯಾಗಿದೆ. ಈ ನಡಾವಳಿಯಲ್ಲಿ ಸೇರಬೇಕು. ಅದು ಜಿಲ್ಲಾಧಿಕಾರಿಗಳೇ ನಡಾವಳಿ ಪತ್ರಕ್ಕೆ ಸಹಿ ಮಾಡಬೇಕು.
ಆದರೆ, ಈ ಬೇಡಿಕೆಗೆ ಸಂಬಂಧಿಸಿ ಕಳೆದ ೩೪ ದಿನಗಳಿಂದ ಪೌರ ಕಾರ್ಮಿಕರು ಹೋರಾಟ ನಡೆಸುತ್ತಿದ್ದರೂ, ಕನಿಷ್ಟ ಒಂದೇ ಒಂದು ದಿನ ಜಿಲ್ಲಾಧಿಕಾರಿ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಯನ್ನು ಆಲಿಸದಿರುವುದು ವಿಚಿತ್ರವಾಗಿದೆ. ಜಿಲ್ಲಾಧಿಕಾರಿಗಳು ಕಾನೂನು ವ್ಯವಸ್ಥೆಗೆ ಮೀರಿದವರೇ? ಎಂದು ಪ್ರಶ್ನಿಸಿದ ಅವರು, ಜಿಲ್ಲಾಧಿಕಾರಿಗಳನ್ನು ಹೊರತು ಪಡಿಸಿ, ಶಾಸಕರು ಪೌರ ಕಾರ್ಮಿಕರ ನಡಾವಳಿ ರೂಪಿಸುವಂತಹ ವ್ಯವಸ್ಥೆ ಇಡೀ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಆದರೆ, ಪ್ರಸ್ತುತ ಕಳೆದ ೩೪ ದಿನಗಳಿಂದ ಪೌರ ಕಾರ್ಮಿಕರ ಹೋರಾಟದಿಂದ ನಗರದಲ್ಲಿ ಕಸ ಭಾರೀ ಪ್ರಮಾಣದಲ್ಲಿ ಸಂಗ್ರಹವಾಗಿತ್ತು. ಮತ್ತೊಂದು ಕಡೆ ಕೊರೊನಾ ಆತಂಕ.
ಈ ಹಿನ್ನೆಲೆಯಲ್ಲಿ ತಾಂತ್ರಿಕವಾಗಿ ಈ ಒಪ್ಪಂದಕ್ಕೆ ಒಪ್ಪಿಕೊಂಡು ಹೋರಾಟವನ್ನು ಹಿಂಪಡೆಯಲಾಗಿದೆ. ಸೋಮವಾರ ಅಥವಾ ಮಂಗಳವಾರ ನೇರ ಪಾವತಿಗೆ ಸಂಬಂಧಿಸಿ ಮುಖ್ಯ ಕಾರ್ಯದರ್ಶಿಗಳಿಂದ ಜಿಲ್ಲಾಧಿಕಾರಿಗಳಿಗೆ ಆದೇಶವೊಂದು ಬರುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ಸದ್ಯ ಫ್ಯಾಬಸ್ ಮಾದರಿ ವೇತನಕ್ಕೆ ನಾವು ಒಪ್ಪಿಕೊಳ್ಳಬೇಕಾಗಿದೆ. ಜಿಲ್ಲಾಧಿಕಾರಿಗಳು ನೇರ ಪಾವತಿ ಒಪ್ಪಂದಕ್ಕೆ ಆದೇಶಿಸುವವರೆಗೂ ಈ ಸಮಸ್ಯೆಗೆ ಪೂರ್ಣ ಪ್ರಮಾಣದ ಇತ್ಯರ್ಥ ಅಸಾಧ್ಯ. ಈ ಹಿನ್ನೆಲೆಯಲ್ಲಿ ಮುಂದೆ ಈ ಬಗ್ಗೆ ನಾವು ನೇರ ಪಾವತಿಗೆ ಸಂಬಂಧಿಸಿ ನಿರ್ಧಾರ ಮಾಡಿಸಲು ಅನುಕೂಲವಾಗುವ ಹಿನ್ನೆಲೆಯಲ್ಲಿ ತಾಂತ್ರಿಕವಾಗಿ ಈ ಹೋರಾಟವನ್ನು ಇಲ್ಲಿಗೆ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆಂದು ಅವರು ಹೇಳಿದರು.