ಡಿಸಿ ಕಚೇರಿ ಆವರಣದಲ್ಲೇ ಜಿಲ್ಲಾ ಆಡಳಿತ ಕಚೇರಿ ಸೂಕ್ತ ಕ್ರಮದ ಭರವಸೆ ನೀಡಿದ ಸಿಎಂ

ಬೀದರ್:ಜ.8: ನಗರದ ಮಧ್ಯಭಾಗದಲ್ಲಿರುವ ಜಿಲ್ಲಾದಿಕಾರಿ ಕಚೇರಿ ಆವರಣದಲ್ಲಿಯೇ ನೂತನ ಜಿಲ್ಲಾ ಆಡಳಿತ ಕಚೇರಿ ಸಂಕೀರ್ಣ ನಿರ್ಮಿಸುವ ಕುರಿತು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ.

ಬುಧವಾರ ನಗರದ ಹಳೆ ಭಾಗದಲ್ಲಿ ನಡೆದ 100 ಹಾಸಿಗೆ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಈ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಯಲ್ಲಿನ ಎಲ್ಲ ಅಂಶಗಳನ್ನು ತಿಳಿದುಕೊಂಡ ಮುಖ್ಯಮಂತ್ರಿಯವರು, ಬೆಂಗಳೂರಿಗೆ ಬಂದು ಚರ್ಚಿಸುವಂತೆ ತಿಳಿಸಿದ್ದಾರೆ ಎಂದು ಶಾಸಕ ರಹೀಂ ಖಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಆಡಳಿತ ಕಚೇರಿ ಸಂಕೀರ್ಣ ನಿರ್ಮಿಸಲು ಈಗಿರುವ ಜಿಲ್ಲಾಧಿಕಾರಿ ಕಚೇರಿ ಆವರಣವೇ ಸೂಕ್ತವಾಗಿದೆ. ಇಲ್ಲಿ ಆಡಳಿತ ಕಚೇರಿ ಸಂಕೀರ್ಣ ನಿರ್ಮಿಸುವುದರಿಂದ ಜನರಿಗೆ ಆಗುವ ಅನುಕೂಲಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

ಜಿಲ್ಲಾದಿಕಾರಿ ಕಚೇರಿ ಆವರಣದಲ್ಲಿಯೇ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಲು ಹಿಂದಿನ ಸಿದ್ದರಾಮಯ್ಯ ಸರಕಾರ ತೀರ್ಮಾನಿಸಿತ್ತು. ಜೊತೆಗೆ ಹಿಂದೆಯೇ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಅನುದಾನವೂ ಲಭ್ಯವಿರುವ ಸಂಗತಿಯನ್ನು ಮುಖ್ಯಮಂತ್ರಿಯವರಿಗೆ ತಿಳಿಸಲಾಗಿದೆ. ಅನುದಾನ ಲಭ್ಯವಿದ್ದ ನಂತರವೂ ವಿಳಂಬ ಆಗುತ್ತಿರುವ ಬಗ್ಗೆ ಸ್ವತ: ಮುಖ್ಯಮಂತ್ರಿಯವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿಗೆ ಬಂದು ಚರ್ಚಿಸುವಂತೆ ತಿಳಿಸಿದರು. ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಶೀಘ್ರದಲ್ಲಿಯೇ ಬೆಂಗಳೂರಿಗೆ ತೆರಳಿ ಮತ್ತೊಂದು ಬಾರಿ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ, ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಶಾಸಕ ರಹೀಂ ಖಾನ್ ತಿಳಿಸಿದ್ದಾರೆ.

ಈಗಿರುವ ಜಿಲ್ಲಾಧಿಕಾರಿ ಕಚೇರಿ ಆವರಣ, ಹಿಂಭಾಗದಲ್ಲಿ ಇರುವ ಶಿಕ್ಷಣ ಇಲಾಖೆ ಹಾಗೂ ಕೃಷಿ ಇಲಾಖೆ ಕಚೇರಿಗಳ ಸ್ಥಳ ಬಳಸಿಕೊಂಡು ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸುವಂತೆ ಮುಖ್ಯಮಂತ್ರಿಯವರನ್ನು ಕೋರಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಮೇಲಿಂದ ಮೇಲೆ ಸ್ಥಳ ಬದಲಾವಣೆ ಮಾಡಲಾಗುತ್ತಿದೆ.

ಹೈದ್ರಾಬಾದ್ ರಸ್ತೆ, ಅಗ್ರಹಾರ, ಕೊಳಾರ ಬಳಿಯ ರೇಷ್ಮೆ ಇಲಾಖೆ ಆವರಣ ಹೀಗೆ ಹಲವು ಸ್ಥಳಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಈ ಪೈಕಿ ಯಾವುದೇ ಸ್ಥಳವೂ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸೂಕ್ತವಾಗಿಲ್ಲ. ಕಲಬುರಗಿ ರಸ್ತೆಯಲ್ಲಿ ಕೊಳಾರ ಬಳಿಯ ರೇಷ್ಮೆ ಇಲಾಖೆ ಸ್ಥಳದಲ್ಲಿ ಕಚೇರಿ ಸಂಕೀರ್ಣ ನಿರ್ಮಿಸುವುದು ಸರಿಯಲ್ಲ. ಈ ಸ್ಥಳವನ್ನು ಬೀದರ್ ತೊಟಗಾರಿಕೆ ಕಾಲೇಜಿಗೆ ಕೊಡಲು ಈಗಾಗಲೇ ಸರಕಾರದ ಮಟ್ಟದಲ್ಲಿಯೇ ತೀರ್ಮಾನ ಆಗಿದೆ. ಇಲ್ಲಿರುವ 70 ಎಕರೆ ಜಮೀನಿನ ಪೈಕಿ 40 ಎಕರೆ ಜಮೀನು, ಕಟ್ಟಡದ ಒಂದು ಭಾಗ, ಶೀತಗೃಹ ಹಾಗೂ ಪ್ರಯೋಗಾಲಯ ಕಟ್ಟಡವನ್ನು ತೋಟಗಾರಿಕೆ ಕಾಲೇಜಿಗೆ ನೀಡಲು ನಿರ್ಧರಿಸಲಾಗಿದೆ. ಈ ಜಮೀನು ಹಸ್ತಾಂತರ ಮಾಡದಿದ್ದಲ್ಲಿ ತೋಟಗಾರಿಕೆ ಕಾಲೇಜಿನ ಮಾನ್ಯತೆ ರದ್ದಾಗಲಿದೆ. ಇದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದ್ದಾರೆ.

ಡಿಸಿ ಕಚೇರಿ ಸ್ಥಳವೇ ಸೂಕ್ತವಾಗಿದ್ದು, ಈ ಕುರಿತು ಮುಖ್ಯಮಂತ್ರಿಯವರಿಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಲಾಗುತ್ತದೆ. ಸಿಎಂ ಅವರು ಇದನ್ನು ಪರಿಗಣಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವ ವಿಶ್ವಾಸ ಇದೆ ಎಂದು ರಹೀಂ ಖಾನ್ ತಿಳಿಸಿದ್ದಾರೆ.