ಡಿಸಿಸಿ ಬ್ಯಾಂಕ್, ಸೊಸೈಟಿ ಸಿಬ್ಬಂದಿಗೆ ಕರ್ತವ್ಯದಲ್ಲಿ ಬದ್ಧತೆಯಿರಲಿ

ಕೋಲಾರ.ಏ.೮: ಡಿಸಿಸಿ ಬ್ಯಾಂಕ್ ಹಾಗೂ ಸೊಸೈಟಿಗಳ ಸಿಬ್ಬಂದಿ ಪ್ರಾಮಾಣಿಕತೆ ಬದ್ದತೆಯೊಂದಿಗೆ ಎಚ್ಚರಿಕೆಯ ಹೆಜ್ಜೆಯಿಡಿ, ಇಲ್ಲವಾದರೆ ಟೀಕಾಕಾರರ ಬಾಯಿಗೆ ಆಹಾರವಾಗಬೇಕಾಗುತ್ತದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಸುಗಟೂರು ರೇಷ್ಮೆಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಡಿಸಿಸಿ ಬ್ಯಾಂಕಿನಿಂದ ೬೮ ಮಂದಿ ರೈತರಿಗೆ ಕೆಸಿಸಿ ಬೆಳೆ ಸಾಲ ವಿತರಿಸಿ, ಮೊಬೈಲ್ ಬ್ಯಾಂಕ್ ವಾಹನದಲ್ಲೇ ಹಣ ಡ್ರಾ ಮಾಡಿಕೊಳ್ಳಲು ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ನಿಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ ಯಾರಿಗೂ ಹೆದರಬೇಕಾಗಿಲ್ಲ, ಬ್ಯಾಂಕ್ ಅಧಃಪತನದಲ್ಲಿದ್ದಾಗ ಯಾರೂ ಮಾತನಾಡಲಿಲ್ಲ, ಅವಿಭಜಿತ ಜಿಲ್ಲೆಯ ರೈತರು, ಮಹಿಳೆಯರಿಗೆ ಸಾಲ ಸೌಲಭ್ಯ ಸಿಗದೇ ವಂಚಿತರಾದಾಗ ಯಾರೂ ತುಟಿ ಬಿಚ್ಚಲಿಲ್ಲ ಎಂದರು.
ಆದರೆ ಈಗ ಬ್ಯಾಂಕ್ ಉತ್ತಮ ಸಾಧನೆ ಮಾಡಿದೆ, ಎರಡೂ ಜಿಲ್ಲೆಯ ಮಹಿಳೆಯರ,ರೈತರ ಮನೆಮಾತಾಗಿದೆ ಇಂತಹ ಸಂದರ್ಭದಲ್ಲಿ ಎಲ್ಲರ ಚಿತ್ತ ಬ್ಯಾಂಕ್ ಮತ್ತು ಸೊಸೈಟಿಯತ್ತ ನೆಟ್ಟಿರುವುದು ಸಹಜ, ಹಾಗೆಯೇ ಟೀಕೆಗಳು ಸಾಮಾನ್ಯ ಎಂದರು. ನಮ್ಮ ಗುರಿ ರೈತರು,ತಾಯಂದಿರಿಗೆ ಆರ್ಥಿಕ ಶಕ್ತಿ ತುಂಬುವುದಾಗಿದೆ, ಈ ಕಾರ್ಯದಲ್ಲಿ ರಾಜೀ ಬೇಡ, ನಿಮ್ಮ ಕೆಲಸವನ್ನು ನೀವು ಬದ್ದತೆಯಿಂದ ಮಾಡಿ, ಆಡಳಿತದಲ್ಲಿ ತಪ್ಪು ಹೆಜ್ಜೆ ಇಟ್ಟರೆ ನಮ್ಮ ತಪ್ಪುಗಳಿಗಾಗಿಯೇ ಕಾಯುತ್ತಿರುವ ಕೆಲವು ಟೀಕಾಕಾರರಿಗೆ ಆಹಾರ ಸಿಕ್ಕಂತಾಗುತ್ತದೆ ಎಂದರು.
ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಸುಗಟೂರು ಸೊಸೈಟಿ ೩೦ ಕೋಟಿಗೂ ಹೆಚ್ಚು ಸಾಲ ವಿತರಿಸಿ ಸಾಧನೆ ಮಾಡಿದೆ, ಜತೆಗೆ ವಸೂಲಾತಿಯಲ್ಲೂ ಅತ್ಯುತ್ತಮ ಸಾಧನೆ ಮಾಡಿರುವ ಹೆಗ್ಗಳಿಕೆ ಹೊಂದಿದೆ ಎಂದರು.ಈ ಸೊಸೈಟಿಗೆ ಉತ್ತಮವಾದ ಕಟ್ಟಡ ಇಲ್ಲದಿರುವುದು ಬೇಸರದ ಸಂಗತಿ ಈ ನಿಟ್ಟಿನಲ್ಲಿ ನಿವೇಶನ ಹುಡುಕಿ ಸುಸಜ್ಜಿತ ಜನಸ್ನೇಹಿಯಾದ ವ್ಯವಸ್ಥೆ ಇರುವ ಸುಂದರ ಕಟ್ಟಡ ನಿರ್ಮಿಸಲು ಎಲ್ಲರೂ ಸಹಕರಿಸಬೇಕಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್, ಆರೋಗ್ಯ ರಕ್ಷಣೆ ಇಂದಿನ ಅತಿ ಮುಖ್ಯ ಕಾರ್ಯವಾಗಿದೆ, ಬಡ,ಮಧ್ಯಮ ಜನತೆ ಖಾಸಗಿ ಮೆಡಿಕಲ್‌ಸ್ಟೋರ್ಸ್‌ನಲ್ಲಿ ಔಷಧಿ ಖರೀದಿಸಲು ಕಷ್ಟವಿದೆ, ಇಂತಹ ಸಂದರ್ಭದಲ್ಲಿ ಜನರಿಕ್ ಔಷಧ ಮಳಿಗೆ ತೆರೆದು ಜನರಿಗೆ ಸೇವೆ ಸಲ್ಲಿಸುವ ಭಾಗ್ಯ ಸೊಸೈಟಿಗಳಿಗೆ ಸಿಕ್ಕಿದೆ, ಆದಷ್ಟು ಶೀಘ್ರವಾಗಿ ಮಳಿಗೆ ತೆರೆಯಿರಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರೈತ ಚೌಡಪ್ಪ ಮಧ್ಯೆ ಪ್ರವೇಶಿಸಿ ಸ್ವಾಮಿ ಡಯಾಬಿಟೀಸ್‌ಗೆ ಮಾತ್ರೆ ಖಾಸಗಿ ಮೆಡಿಕಲ್ ಸ್ಟೋರ್ಸ್‌ನಲ್ಲಿ ೫೧೨ ರೂ ಆಗುತ್ತೆ, ಜನರಿಕ್ ಮಳಿಗೆಯಲ್ಲಿ ಕೇವಲ ೧೧೪ ರೂ ಮಾತ್ರ, ಜನೌಷಧ ಮಳಿಗೆ ಆರಂಭಿಸಿ ಬಡವರು,ಮಧ್ಯಮ ವರ್ಗದ ರೋಗಿಗಳಿಗೆ ನೆರವಾಗಿ ಎಂದು ಕೋರಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ದಯಾನಂದ್ ಮಾತನಾಡಿ, ರೈತರು,ಮಹಿಳೆಯರು ಇತರೆ ಬ್ಯಾಂಕುಗಳ ಎಟಿಎಂನಲ್ಲಿ ಹಣ ಡ್ರಾ ಮಾಡಿದರೆ ಶುಲ್ಕ ಕಡಿತಗೊಳ್ಳುತ್ತದೆ ಆದರೆ ಡಿಸಿಸಿ ಬ್ಯಾಂಕಿನ ಮೈಕ್ರೋ ಎಟಿಎಂನಲ್ಲಿ ಹಣ ಡ್ರಾ ಮಾಡಿದರೆ ಯಾವುದೇ ಶುಲ್ಕ ಕಡಿತವಿಲ್ಲ ಎಂದು ತಿಳಿಸಿದರು.
ಕೆಸಿಸಿ ಸಾಲ ಪಡೆದ ರೈತರಿಗೆ ಬಡ್ಡಿ ಕಟ್ಟಬೇಕಾಗಿಲ್ಲ, ಅಸಲು ಸಮಯಕ್ಕೆ ಸರಿಯಾಗಿ ಪಾವತಿಸಿ, ತಾಯಂದಿರಂತೆ ನಂಬಿಕೆ ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ಸುಗಟೂರು ಸೊಸೈಟಿ ಇಂದು ಆರ್ಥಿಕವಾಗಿ ಸದೃಢವಾಗಿದೆ, ಇದಕ್ಕೆ ಡಿಸಿಸಿ ಬ್ಯಾಂಕಿನ ನೆರವೂ ಕಾರಣವಾಗಿದೆ, ಶೀಘ್ರ ಹೊಸ ಕಟ್ಟಡ ಕಟ್ಟಲು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿದ್ದೇವೆ ಬೇಗ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಸೊಸೈಟಿ ಉಪಾಧ್ಯಕ್ಷ ವೆಂಕಟರಾಮರೆಡ್ಡಿ, ನಿರ್ದೇಶಕರಾದ ಎ.ಸಿ.ಭಾಸ್ಕರ್, ರಮಣರೆಡ್ಡಿ, ವೆಂಕಟರಮಣಪ್ಪ, ಗೋಪಾಲಪ್ಪ, ಹನುಮೇಗೌಡ, ಸಿಒರಾಜ್, ಸೊಸೈಟಿ ಸಿಇಒ ಪುಟ್ಟರಾಜ್ ಸಿಬ್ಬಂದಿ ಚೈತ್ರಾ ಮತ್ತಿತರರಿದ್ದರು.