ಡಿಸಿಸಿ ಬ್ಯಾಂಕ್ ಸಹಕಾರಿ ರಂಗದಲ್ಲಿ ದೇಶಕ್ಕೆ ಮಾದರಿ-ಶ್ರೀನಿವಾಸಗೌಡ

ಕೋಲಾರ,ಸೆ,೧೭- ಸಹಕಾರಿ ಸಂಸ್ಥೆಯೊಂದನ್ನು ರೈತರು,ಮಹಿಳೆಯರ ಆರ್ಥಿಕಾಭಿವೃದ್ದಿಗೆ ನೆರವಾಗುವ ರೀತಿಯಲ್ಲಿ ಹೇಗೆ ನಡೆಸಬಹುದು ಎಂಬುದನ್ನು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ದೇಶಕ್ಕೆ ಮಾದರಿಯಾಗಿ ತೋರಿಸಿಕೊಟ್ಟಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಕೋಲಾರ ದಕ್ಷಿಣ ಕಸಬಾ ಸೊಸೈಟಿ ಆಶ್ರಯದಲ್ಲಿ ಬ್ಯಾಂಕಿನಿಂದ ರೈತರಿಗೆ ೧.೨೬ ಕೋಟಿ ರೂ ಕೆಸಿಸಿ ಸಾಲ ವಿತರಿಸಿ ಅವರು ಮಾತನಾಡುತ್ತಾ
ಬ್ಯಾಂಕಿನ ಹಿಂದಿನ ಸ್ಥಿತಿ ೪೦ ಕೋಟಿಯೂ ವಹಿವಾಟು ಇರಲಿಲ್ಲ, ದಿವಾಳಿಯಾಗಿತ್ತು, ಅಂತಹ ಬ್ಯಾಂಕ್ ಇಂದು ೧೫೦೦ ಕೋಟಿ ರೂ ಸಾಲ ನೀಡುತ್ತಿದೆ ಎಂದರೆ ಹೆಮ್ಮೆ ಎನಿಸುತ್ತದೆ, ಕೋಲಾರ ಡಿಸಿಸಿ ಬ್ಯಾಂಕ್ ಕುರಿತು ಸಹಕಾರಿ ಕ್ಷೇತ್ರದಲ್ಲಿ ಗರ್ವದಿಂದ ಹೇಳಿಕೊಳ್ಳುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ ಸಹಕಾರಿ ವ್ಯವಸ್ಥೆ ಬಡವರ ಆಸ್ತಿ, ವಾಣಿಜ್ಯ ಬ್ಯಾಂಕುಗಳು ಬಡವರಿಗೆ ಸಾಲ ನೀಡೊಲ್ಲ, ಆದರೆ ಸಹಕಾರ ಬ್ಯಾಂಕ್ ಮನೆಬಾಗಿಲಿಗೆ ಹೋಗಿನೆರವು ನೀಡುವ ಬದ್ದತೆ ಹೊಂದಿದೆ ಎಂದರು.
ಬ್ಯಾಂಕ್ ವಿರುದ್ದ ಮಾತನಾಡುವ ಟೀಕಾಕಾರರಿಗೆ ನಾನು ಉತ್ತರ ನೀಡುವುದಿಲ್ಲ, ಮೌನದಿಂದಲೇ ಸಮಾಜದ ಕಟ್ಟಕಡೆಯ ಪ್ರತಿ ಕುಟುಂಬಕ್ಕೂ ಸಾಲ ಒದಗಿಸುವ ಮೂಲಕ ಜನರಿಂದಲೇ ಉತ್ತರ ಸಿಗುವಂತೆ ಮಾಡಿದ್ದೇವೆ ಎಂದರು.
ಪಾರದರ್ಶಕತೆಗೆ ಒತ್ತು ನೀಡಿದ್ದೇವೆ, ಸಾಲದ ಹಣ ನಿಮ್ಮ ಖಾತೆಗೆ ಹಾಕಿದ್ದೇವೆ, ನಿಮಗೆ ಬ್ಯಾಂಕ್ ನೀಡಿರುವ ರೂಪೇಕಾರ್ಡ್ ಮೂಲಕ ಎಟಿಎಂನಲ್ಲಿ ಡ್ರಾ ಮಾಡಿಕೊಳ್ಳಿ ಎಂದು ರೈತರಿಗೆ ಕರೆ ನೀಡಿ, ಉಳಿತಾಯದ ಹಣ ಡಿಸಿಸಿ ಬ್ಯಾಂಕ್ ಅಥವಾ ಸೊಸೈಟಿಯಲ್ಲೇ ಇಟ್ಟು ಹೆಚ್ಚಿನ ಬಡ್ಡಿ ಪಡೆಯಿರಿ, ಬ್ಯಾಂಕನ್ನು ಬೆಳೆಸಿ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ ಕುಮಾರಸ್ವಾಮಿ,ಸಿದ್ದರಾಮಯ್ಯ ಸರ್ಕಾರಗಳ ಸಾಲ ಮನ್ನಾದಿಂದ ದಕ್ಷಿಣ ಕಸಬಾ ಸೊಸೈಟಿ ವ್ಯಾಪ್ತಿಯ ರೈತರಿಗೆ ೩ ಕೋಟಿ ರೂ ಲಾಭವಾಗಿದೆ ಎಂದರು.
ಹಿಂದೆ ಕಸಬಾ ಸೊಸೈಟಿಗೆ ೩ ಕೋಟಿ ರೂ ಸಾಲ ನೀಡಲು ಆತಂಕ ಇತ್ತು ಆದರೆ ಡಿಸಿಸಿ ಬ್ಯಾಂಕ್ ಈ ಸೊಸೈಟಿ ಮೂಲಕ ಇಂದು ೩೦ ಕೋಟಿ ರೂ ಸಾಲ ನೀಡಿದೆ, ಇದಕ್ಕೆ ಸೊಸೈಟಿಯ ಆಡಳಿತ ಮಂಡಳಿಯ ದಕ್ಷತೆಯೂ ಕಾರಣ ಎಂದ ಅವರು, ಇದೀಗ ಗಣಕೀಕರಣದಿಂದ ಪಾರದರ್ಶಕಗೆ ಅವಕಾಶ ನೀಡಲಾಗಿದೆ ಎಂದರು.
ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ ಕಸಬಾ ಸೊಸೈಟಿಯೂ ದಿವಾಳಿಯಾಗಿತ್ತು, ಆದರೆ ಅದನ್ನು ಪ್ರಗತಿಯತ್ತ ಕೊಂಡೊಯ್ದವರು ಛತ್ರಕೋಡಿಹಳ್ಳಿ ಮುನೇಗೌಡ ಅವರ ಪ್ರಯತ್ನದಿಂದ ಇಂದು ಕಸಬಾ ಸೊಸೈಟಿ ಉತ್ತಮ ಸ್ಥಿತಿಯತ್ತ ಸಾಗಿದೆ ಎಂದರು.
ಸರ್ಕಾರ ನೀಡಿರುವ ಗುರಿಗಿಂತ ಹೆಚ್ಚಿನ ಸಾಲ ನೀಡಿದ್ದೇವೆ, ರೈತರಲ್ಲಿ ಪ್ರಾಮಾಣಿಕತೆ ಇದೆ, ಸಮರ್ಪಕ ಸಾಲ ಮರುಪಾವತಿಯ ಮೂಲಕ ಬ್ಯಾಂಕಿನ ನಂಬಿಕೆ ಬಲಗೊಳಿಸಿದ್ದಾರೆ ಎಂದರು.
ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ ಯಾವುದೇ ಸೊಸೈಟಿ ಸರಿಯಾಗಿರಲಿ ಲೆಕ್ಕ ಪಕ್ಕ ಇರಬೇಕು, ಲೆಕ್ಕದಲ್ಲಿ ತಪ್ಪಾದರೆ ಸೊಸೈಟಿ ಉಳಿಯಲ್ಲ ಎಂದು ತಿಳಿಸಿ, ಬ್ಯಾಂಕ್‌ನ ಎಲ್ಲಾ ಶಾಖೆ ಗಣಕೀಕರಣ ಮಾಡಿದ್ದೇವೆ, ಇದೀಗ ಎಲ್ಲಾ ಸೊಸೈಟಿಗಳ ಗಣಕೀಕರಣ ಮಾಡಿ ಪಾರದರ್ಶಕ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸಪ್ಪ ಮಾತನಾಡಿ ೮೭ ರೈತ ಕುಟುಂಬಗಳಿಗೆ ೧.೨೬ ಕೋಟಿ ರೂ ಕೆಸಿಸಿ ಸಾಲ ನೀಡುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೊಸೈಟಿ ಉಪಾಧ್ಯಕ್ಷ ಶ್ರೀನಿವಾಸಪ್ಪ, ನಿರ್ದೇಶಕರಾದ ಮುನಿಯಪ್ಪ, ವೆಂಕಟೇಶಪ್ಪ, ಕೂಟೇರಿ ವೆಂಕಟೇಶ್, ಟಿ.ಶ್ರೀನಿವಾಸ್, ಎಂ.ಶ್ರೀರಾಮರೆಡ್ಡಿ, ನಾರಾಯಣಸ್ವಾಮಿ,ಎಪಿಎಂಸಿ ಮಾಜಿ ಅಧ್ಯಕ್ಷ ಟಮಕ ವೆಂಕಟೇಶಪ್ಪ, ಬ್ಯಾಂಕ್ ವ್ಯವಸ್ಥಾಪಕ ಅಂಬರೀಷ್, ಸೊಸೈಟಿ ಸಿಇಒ ವೆಂಕಟೇಶ್ ಮತ್ತಿತರರಿದ್ದರು.