ಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ಸಾಲಸೌಲಭ್ಯ: ಎಸ್.ಟಿ.ಎಸ್


ಬೆಳಗಾವಿ, ನ.19- ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕುಗಳ ಮೂಲಕ ರೈತರಿಗೆ 15,300 ಕೋಟಿ ರೂಪಾಯಿ ಸಾಲವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಹಕಾರ ಇಲಾಖೆಯ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನೇತೃತ್ವದಲ್ಲಿ “ಕೋರೊನಾ ಸೋಂಕು-ಆತ್ಮ ನಿರ್ಭರ ಭಾರತ ಸಹಕಾರ ಸಂಸ್ಥೆಗಳು” ಎಂಬ ಧ್ಯೇಯದೊಂದಿಗೆ ಮಹಾಂತೇಶ ನಗರದಲ್ಲಿರುವ ಜಿಲ್ಲಾ ಹಾಲು ಒಕ್ಕೂಟದ ಡೇರಿ ಆವರಣದಲ್ಲಿ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆತ್ಮನಿರ್ಭರ್ ಯೋಜನೆಯಡಿ 630 ಕೋಟಿ ರೂಪಾಯಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ.
ಸಣ್ಣ ರೈತರು ಸೇರಿದಂತೆ ಲಾಕ್ ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ ಎಲ್ಲರಿಗೂ ಸಾಲ ಸೌಲಭ್ಯ ನೀಡಲಾಗುವುದು. ನಾಲ್ಕು ವಿಭಾಗಗಳ ಮೂಲಕ ಸಾಲ-ಸೌಲಭ್ಯವನ್ನು ವಿತರಿಸಲಾಗುವುದು ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.
ರೈತರ ಅನುಕೂಲಕ್ಕಾಗಿ ಕೆ.ಎಂ.ಎಫ್. ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆ.ಎಂ.ಎಫ್. ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ರಾಜ್ಯದ ಎಲ್ಲ 14 ಯುನಿಯನ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಹೈನುಗಾರರ ನೆರವಿಗೆ ಬಂದ ಸರ್ಕಾರವು ಅವರಿಂದ ಹಾಲು ಖರೀದಿಸಿ 2 ಕೋಟಿ ಲೀಟರ್ ಹಾಲನ್ನು ಉಚಿತವಾಗಿ ಜನರಿಗೆ ಹಂಚಿಕೆ ಮಾಡಿರುವುದು ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
ಕೆ.ಎಂ.ಎಫ್. ಸದ್ಯಕ್ಕೆ 130 ಕೋಟಿ ರೂಪಾಯಿ ಲಾಭದಲ್ಲಿದೆ. ಲಾಕ್ ಡೌನ್ ಬಳಿಕ ವ್ಯವಹಾರ ಚೇತರಿಸಿಕೊಳ್ಳುತ್ತಿದೆ.
ಸಹಕಾರಿ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರು ಸಹಕಾರಿ ಸಂಸ್ಥೆಗಳು ಲಾಭದಾಯಕವಾಗುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸೋಮಶೇಖರ್ ಹೇಳಿದರು.
ಬೆಳಗಾವಿ ನೂರು ಎಕರೆಯಲ್ಲಿ ಮೆಗಾ ಡೇರಿ ನಿರ್ಮಾಣ ಮಾಡುವುದು ಬಾಲಚಂದ್ರ ಜಾರಕಿಹೊಳಿ ಅವರ ಕನಸು. ಇದರಿಂದ ಈ ಭಾಗದ ನೂರಾರು ಜನರಿಗೆ ಉದ್ಯೋಗ ಲಭಿಸುವುದರ ಜತೆಗೆ ಹೈನುಗಾರಿಕೆ ಉದ್ಯಮ ಪ್ರಗತಿಯಾಗಲಿದೆ. ಶೀಘ್ರದಲ್ಲೇ ಮೆಗಾ ಡೇರಿ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಎಂದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು ಎಂದು ಪ್ರಭು ಚವಾಣ ಸ್ಪಷ್ಟಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಭಾರತದಲ್ಲಿ ಅಮುಲ್ ಹಾಗೂ ಕೆ.ಎಂ.ಎಫ್. ಗಟ್ಟಿಯಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿವೆ ಎಂದರು.
ಪ್ರತಿದಿನ 89 ಲಕ್ಷ ಲೀಟರ್ ಹಾಲು ಸಂಗ್ರಹ ರೈತರಿಗೆ ಕೆ.ಎಂ.ಎಫ್. ಮೇಲಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.
12 ಲಕ್ಷ ಹಸು-ಎಮ್ಮೆಗಳಿಗೆ ವಿಮೆ ಭದ್ರತೆ:
ಕೆ.ಎಂ.ಎಫ್. ವತಿಯಿಂದ ರಾಜ್ಯದ ಎಲ್ಲ 12 ಲಕ್ಷ ಹಸು-ಎಮ್ಮೆಗಳಿಗೆ ವಿಮೆ ಭದ್ರತೆ ಒದಗಿಸಲಾಗುವುದು. ಇದರಿಂದ ಹೈನುಗಾರರಿಗೆ ಅನುಕೂಲವಾಗಲಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸದ್ಯಕ್ಕೆ 15 ಸಾವಿರ ಕೋಟಿ ವಾರ್ಷಿಕ ವಹಿವಾಟನ್ನು ಮುಂದಿನ ನಾಲ್ಕು ವರ್ಷಗಳಲ್ಲಿ 25 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
4-5 ಲಕ್ಷ ಲೀಟರ್ ಹಾಲು ಸಂಗ್ರಹಿಸಿದರೆ ಬೆಳಗಾವಿಯಲ್ಲಿ ಮೆಗಾ ಡೇರಿ ನಿರ್ಮಾಣ ಸಾಧ್ಯವಾಗಲಿದೆ ಎಂದು ಜಾರಕಿಹೊಳಿ ಹೇಳಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯವರಾದ ಬಸನಗೌಡ ಪಾಟೀಲ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.