ಡಿಸಿಸಿ ಬ್ಯಾಂಕ್ ಗೆ ತೇಲ್ಕೂರ ರಾಜೀನಾಮೆ

ಕಲಬುರಗಿ:ಮೇ.19: ಇಲ್ಲಿನ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ( ಡಿಸಿಸಿ) ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜಕುಮಾರ ಪಾಟೀಲ್ ತೇಲ್ಕೂರ ರಾಜೀನಾಮೆ ನೀಡಿದ್ದಾರೆ.

ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ರಾಜೀನಾಮೆ ಸಲ್ಲಿಸಿದ್ದು, ತಕ್ಷಣ ಜಾರಿಗೆ ಬರುವಂತೆ ರಾಜೀನಾಮೆ ಅಂಗೀಕರಿಸುವಂತೆ ಕೋರಿದ್ದಾರೆ.

ತಾವು ಅಧ್ಯಕ್ಷರಾದ ನಂತರ ಎರಡುವರೆ ವರ್ಷಗಳಿಂದ ಸ್ಥಗಿತ ವಾಗಿದ್ದ ಬಡ್ಡಿ ರಹಿತ ಸಾಲ ಪ್ರಾರಂಭಿಸಲಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಪ್ರಮುಖವಾಗಿ 900 ಕೋ.ರೂ ಬಡ್ಡಿ ರಹಿತ ಸಾಲ ವಿತರಿಸಿರುವುದು ಬ್ಯಾಂಕ್ ನ ಇತಿಹಾಸದಲ್ಲಿ ದಾಖಲೆಯಾಗಿದೆ. ಇದರಿಂದ ಲಕ್ಷಾಂತರ ರೈತರಿಗೆ ಉಪಯೋಗ ವಾಯಿತು ಎಂದಿದ್ದಾರೆ. ಒಟ್ಟಾರೆ ಎಲ್ಲರ ಸಹಕಾರದಿಂದ ಇಷ್ಟೊಂದು ಪ್ರಮಾಣದಲ್ಲಿ ಸಾಲ ಕೊಡಲು ಸಾಧ್ಯ ವಾಯಿತು ಎಂದಿದ್ದಾರೆ.

ಕೆಲವು ಆಡಳಿತ ಸುಧಾರಣಾ ಕ್ರಮದಿಂದ ಪ್ರಮುಖವಾಗಿ ಬ್ಯಾಂಕ್ ಲಾಭದತ್ತ ಹೆಜ್ಜೆ ಹಾಕಿತು. ಇನ್ನಷ್ಟು ಬ್ಯಾಂಕ್ ಅಭಿವೃದ್ಧಿ ಹೊಂದಿ ಕಲಬುರಗಿ- ಯಾದಗಿರಿ ಜಿಲ್ಲೆಯ ಎಲ್ಲ ಪ್ರತಿಯೊಬ್ಬ ರೈತರಿಗೆ ಸಾಲ ಕೊಡಿಸಲು ಉದ್ದೇಶಿಸಲಾಗಿತ್ತು. ಆದರೆ ಅದು ಕೈಗೂಡಲಿಲ್ಲ. ಮುಂದೆ ಅಧ್ಯಕ್ಷರಾದವರು ಅದನ್ನು ಸಾಕಾರಗೊಳೊಸಲಿ‌. ತಾವು ಬ್ಯಾಂಕ್ ನ ಅಧ್ಯಕ್ಷರಾದ ಮೇಲೆ ಸೇಡಂ ತಾಲೂಕಿಗೆ 120 ಕೋ.ರೂಬಡ್ಡಿ ರಹಿತ ಸಾಲ ವಿತರಿಸಲಾಗಿದೆ. ಆದರೆ ತಾವು ಅಧ್ಯಕ್ಷರಾಗುವ ಮುಂಚೆ ಸೇಡಂ ತಾಲೂಕಿಗೆ ಕೇವಲ ಎಂಟು ಕೋ.ರೂ ಸಾಲ ಬೆಳೆಸಾಲ ವಿತರಿಸಲಾಗಿತ್ತು ಎಂದಿದ್ದಾರೆ.‌

ಪ್ರಮುಖವಾಗಿ ಸೇಡಂ ತಾಲೂಕಿನಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಿ 15 ಸಾವಿರಕ್ಕೂ ಅಧಿಕ ಹೆಚ್ಚು ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸಲು ಸಾಲ ನೀಡಲಾಗಿದೆ. ನೂರಾರು ಕೋಟಿ ರೂ ಠೇವಣಿ ತಂದಿರುವುದು, ಕಲಬುರಗಿಯಲ್ಲಿ ಬ್ಯಾಂಕ್ ಗೆ ನಿವೇಶನ ಖರೀದಿಸುವುದರ ಜತೆಗೇ ಹತ್ತಾರು ನಿಟ್ಟಿನ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಹೈನೋದ್ಯಮ ಹೆಚ್ಚಳಕ್ಕೆ ಯೋಜನೆ ರೂಪಿಸಿ ಚಾಲನೆ ನೀಡಲಾಗಿರುವುದನ್ನು ಹಾಗೂ ಎಲ್ಲರಿಗೂ ಸಾಲ ದೊರಕಿಸಲು ಹೊಸ ಅಧ್ಯಕ್ಷರು ಮುಂದಾಗಬೇಕು ಎಂದು ತೇಲ್ಕೂರ ರೈತರ ಪರವಾಗಿ ಸಲಹೆ ನೀಡಿದ್ದಾರೆ.‌

ಬ್ಯಾಂಕ್ ನ ಅಭಿ ವೃದ್ಧಿ ಹಿತದೃಷ್ಟಿಯಿಂದ ಹಾಗೂ ಪ್ರತಿಯೊಬ್ಬ ರೈತಗೆ ಸಾಲ ದೊರಕಲು ರಾಜಕುಮಾರ ಪಾಟೀಲ್ ಅವರೇ ಅಧ್ಯಕ್ಷರಾಗಿ ಮುಂದುವರೆಯುವುದು ಅಗತ್ಯವಾಗಿದೆ ಹಾಗೂ ಸೂಕ್ತವಾಗಿದೆ ಎಂದು ರೈತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.